ಇತರರಿಗಿಂತ ಶೇ.16ರಷ್ಟು ಕಡಿಮೆ ಆದಾಯ ಗಳಿಸುತ್ತಿರುವ ದಲಿತ ಉದ್ಯಮಿಗಳು: ಅಧ್ಯಯನ ವರದಿ

Update: 2024-08-12 11:09 GMT

PC : timesofindia.indiatimes.com

ಹೊಸದಿಲ್ಲಿ: ಭಾರತದಲ್ಲಿ ದಲಿತ ಉದ್ಯಮಿಗಳು ಇನ್ನಿತರ ಶೋಷಿತ ಸಮುದಾಯಗಳು ಸೇರಿದಂತೆ ಇತರ ಉದ್ಯಮಿಗಳಿಗಿಂತ ಶೇ.16ರಷ್ಟು ಕಡಿಮೆ ಆದಾಯವನ್ನು ಗಳಿಸುತ್ತಿದ್ದಾರೆ ಎಂದು ಹೇಳಿರುವ ಅಧ್ಯಯನ ವರದಿಯೊಂದು, ಇದು ಈಗಲೂ ಉಳಿದುಕೊಂಡಿರುವ ಸಾಮಾಜಿಕ ಕಳಂಕತನವನ್ನು ಪ್ರತಿಬಿಂಬಿಸುತ್ತಿದೆ ಎಂದು ಬೆಟ್ಟು ಮಾಡಿದೆ ಎಂದು telegraphindia.com ವರದಿ ಮಾಡಿದೆ.

ವ್ಯಕ್ತಿಯ ಸಾಮಾಜಿಕ ನಂಟಿನ ಅಳತೆಗೋಲಾಗಿರುವ ಸಾಮಾಜಿಕ ಬಂಡವಾಳವು ಜೀವನದ ಹಲವು ಸಂದರ್ಭಗಳಲ್ಲಿ ಹೆಚ್ಚು ಪ್ರಯೋಜನಕಾರಿ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆಯಾದರೂ ಇದು ದಲಿತ ಉದ್ಯಮಿಗಳ ಆದಾಯವನ್ನು ಹೆಚ್ಚಿಸಲು ನೆರವಾಗಿಲ್ಲ ಎನ್ನುವುದನ್ನು ಭಾರತ,ಬ್ರಿಟನ್ ಮತ್ತು ಆಸ್ಟ್ರೇಲಿಯಾಗಳ ಸಂಶೋಧಕರು ನಡೆಸಿರುವ ಅಧ್ಯಯನವು ಕಂಡುಕೊಂಡಿದೆ.

‘ಇದು ಅಚ್ಚರಿದಾಯಕವಾಗಿದೆ, ಅನಿರೀಕ್ಷಿತವೂ ಆಗಿದೆ. ಸಾಮಾಜಿಕ ಬಂಡವಾಳವು ಎಲ್ಲರಿಗೂ ನೆರವಾಗುತ್ತದೆ ಎಂದು ಸಾಮಾನ್ಯವಾಗಿ ಭಾವಿಸಲಾಗಿದೆ. ಆದರೆ ಒಬಿಸಿಗಳು, ಆದಿವಾಸಿಗಳು ಮತ್ತು ಮುಸ್ಲಿಮರಂತಹ ಇತರ ಹಿಂದುಳಿದ ಸಮುದಾಯಗಳು ಎದುರಿಸುತ್ತಿರುವುದಕ್ಕಿಂದ ಭಿನ್ನವಾಗಿ ಅನಾನುಕೂಲಗಳು ಮತ್ತು ಕಳಂಕವನ್ನು ದಲಿತರು ಎದುರಿಸುತ್ತಿದ್ದಾರೆ ಎನ್ನುವುದನ್ನು ನಮ್ಮ ಸಂಶೋಧನೆಗಳು ಸೂಚಿಸಿವೆ ’ ಎಂದು ಐಐಎಂ-ಬೆಂಗಳೂರಿನ ಸಹಾಯಕ ಪ್ರಾಧ್ಯಾಪಕ ಹಾಗೂ ಅಧ್ಯಯನ ತಂಡದ ಪ್ರಮುಖ ಸದಸ್ಯ ಪ್ರತೀಕ ರಾಜ್ ಹೇಳಿದ್ದಾರೆ.

ಅಧ್ಯಯನವು ದೇಶಾದ್ಯಂತದ ಸಮೀಕ್ಷೆಯ ದತ್ತಾಂಶಗಳನ್ನು ಬಳಸಿಕೊಂಡು ವಿವಿಧ ಜನಸಂಖ್ಯೆ ಗುಂಪುಗಳಾದ್ಯಂತ ಆದಾಯದ ಮಾದರಿಗಳನ್ನು ಅನ್ವೇಷಿಸಿದೆ.

‘ದತ್ತಾಂಶಗಳ ವಿಶ್ಲೇಷಣೆಗಾಗಿ ನಾವು ಮೂರು ತಂತ್ರಗಳನ್ನು ಬಳಸಿದ್ದೆವು ಮತ್ತು ಇವೆಲ್ಲವೂ ಒಂದೇ ರೀತಿಯ ಫಲಿತಾಂಶಗಳನ್ನು ನೀಡಿವೆ. ದಲಿತ ಉದ್ಯಮಿಗಳು ಮತ್ತು ಇತರ ಉದ್ಯಮಿಗಳ ಆದಾಯಗಳಲ್ಲಿ ಶೇ.15 ಮತ್ತು ಶೇ.18ರ ನಡುವೆ ಅಂತರಕ್ಕೆ ಜಾತಿ ಮಾತ್ರ ಕಾರಣವಾಗಿದೆ ಮತ್ತು ನಗರ ಅಥವಾ ಗ್ರಾಮೀಣ ಪ್ರದೇಶ, ಶಿಕ್ಷಣ,ಕೌಟುಂಬಿಕ ಹಿನ್ನೆಲೆ ಅಥವಾ ಭೂ ಮಾಲಿಕತ್ವದಂತಹ ಇತರ ಅಂಶಗಳಲ್ಲ ಎಂದು ರಾಜ್ ವಿವರಿಸಿದರು. ಅಧ್ಯಯನ ವರದಿಯು ಈ ವಾರ ಪಿಎಲ್‌ಒಎಸ್ ಒನ್ ಸಂಶೋಧನಾ ಜರ್ನಲ್‌ನಲ್ಲಿ ಪ್ರಕಟಗೊಂಡಿದೆ.

ಒಬಿಸಿಗಳು,ಎಸ್‌ಟಿಗಳು ಅಥವಾ ಮುಸ್ಲಿಮರಂತಹ ಇತರ ಹಿಂದುಳಿದ ಗುಂಪುಗಳ ಉದ್ಯಮಿಗಳು ಸಾಮಾಜಿಕ ಬಂಡವಾಳದಿಂದ ಲಾಭವನ್ನು ಪಡೆದಿದ್ದಾರೆ,ಅವರ ಸಾಮಾಜಿಕ ಬಂಡವಾಳ ಹೆಚ್ಚಿದಷ್ಟೂ ಅವರ ಆದಾಯ ಮಟ್ಟಗಳು ಹೆಚ್ಚುತ್ತವೆ. ಆದರೆ ಪರಿಶಿಷ್ಟ ಜಾತಿಗಳು ಎಂದೂ ಕರೆಯಲ್ಪಡುವ ದಲಿತರಿಗೆ ಸಾಮಾಜಿಕ ಬಂಡವಾಳದಿಂದ ಹೇಳುವಂತಹ ನೆರವಾಗಿಲ್ಲ ಮತ್ತು ಇದೇ ಮಟ್ಟದ ಸಾಮಾಜಿಕ ಬಂಡವಾಳವನ್ನು ಹೊಂದಿರುವ ಇತರರಿಗೆ ಹೋಲಿಸಿದರೆ ಆದಾಯದ ಅನನುಕೂಲತೆಗಳನ್ನು ಹೆಚ್ಚಿಸಿದೆ ಎನ್ನುವುದನ್ನು ವಿಶ್ಲೇಷಣೆಯು ಬಹಿರಂಗಗೊಳಿಸಿದೆ.

ತಜ್ಞರ ಪ್ರಕಾರ ಭಾರತದ 140 ಕೋಟಿ ಜನಸಂಖ್ಯೆಯಲ್ಲಿ ದಲಿತರ ಪಾಲು 25 ಕೋಟಿಗಳಿಂದ 30 ಕೋಟಿ ಇದೆ.

ದಲಿತರು ವ್ಯಕ್ತಿಗಳಾಗಿ ತಮಗೆ ಅಂಟಿಕೊಂಡಿರುವ ಮತ್ತು ಸಾಮಾಜಿಕ ಸಂವಹನಗಳಲ್ಲಿ ಶಾಶ್ವತವಾಗಿರುವ ಕಳಂಕವನ್ನು ಎದುರಿಸುತ್ತಿದ್ದಾರೆ ಎಂದು ಆಸ್ಟ್ರೇಲಿಯಾದ ಮೆಲ್ಬರ್ನ್ ವಿವಿಯ ಮ್ಯಾನೇಜ್‌ಮೆಂಟ್ ಪ್ರೊಫೆಸರ್ ಹಾಗೂ ಅಧ್ಯಯನ ತಂಡದ ಇನ್ನೋರ್ವ ಸದಸ್ಯ ಹರಿ ಬಾಬುಜಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News