ಡಾ. ಮನಮೋಹನ್ಸಿಂಗ್: ಮೇಧಾವಿ ರಾಜಕಾರಣಿ, ಮಹಾನ್ ಅರ್ಥಶಾಸ್ತ್ರಜ್ಞ, ಹಕ್ಕುಗಳ ಹರಿಕಾರ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದೊಂದಿಗೆ ಭಾರತವು ಓರ್ವ ಮಹಾನ್ ಅರ್ಥಶಾಸ್ತ್ರಜ್ಞ ಹಾಗೂ ಆದರ್ಶ ರಾಜಕಾರಣಿಯನ್ನು ಕಳೆದುಕೊಂಡಿದೆ.
ಭಾರತದ ಹದಿನಾಲ್ಕನೇ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರು ಶ್ರೇಷ್ಠ ಅರ್ಥಶಾಸ್ತ್ರಜ್ಞರಾಗಿಯೂ ವಿಶ್ವದಾದ್ಯಂತ ಗೌರವಿಸಲ್ಪಟ್ಟಿದ್ದಾರೆ. ಭಾರತದ ಪ್ರಪ್ರಥಮ ಸಿಖ್ ಸಮುದಾಯದ ಪ್ರಧಾನಿಯೆಂಬ ಹೆಗ್ಗಳಿಕೆಗೆ ಪಾತ್ರರಾದ ಅವರು ಭಾರತವನ್ನು ಉದಾರವಾದದ ಆರ್ಥಿಕತೆಯೆಡೆಗೆ ಕೊಂಡೊಯ್ಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ದೇಶದ ಆರ್ಥಿಕ ಬೆಳವಣಿಗೆಗೆ ಉತ್ತೇಜಿಸುವಲ್ಲಿ, ಬಡತನದ ಪ್ರಮಾಣವನ್ನು ಕುಗ್ಗಿಸುವಲ್ಲಿ ಹಾಗೂ ಭಾರತವು ಒಂದು ಪ್ರಮುಖ ಆರ್ಥಿಕ ಶಕ್ತಿಯಾಗುವುದಕ್ಕೆ ದಾರಿ ಮಾಡಿಕೊಟ್ಟ ಮೇಧಾವಿ ನಾಯಕನಾಗಿ ಇತಿಹಾಸದ ಪುಟಗಳಿಗೆ ಅವರು ಸೇರ್ಪಡೆಗೊಂಡಿದ್ದಾರೆ. 2004ರಿಂದ 2014ರವರೆಗೆ ಭಾರತದ ಪ್ರಧಾನಿಯಾಗಿ ಅವರು ಸೇವೆ ಸಲ್ಲಿಸಿದ್ದರು. ಮಾಹಿತಿಹಕ್ಕು, ಶಿಕ್ಷಣದ ಹಕ್ಕು, ಆಹಾರದ ಹಕ್ಕಿನಂತಹ ಕ್ರಾಂತಿಕಾರಿ ಮಸೂದೆಗಳನ್ನು ಜಾರಿಗೊಳಿಸುವ ಮೂಲಕ ಜನಸಾಮಾನ್ಯರಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದರು.
(PC : PTI)
ಮನಮೋಹನ್ ಸಿಂಗ್ ಅವರು 1932ರಲ್ಲಿ ಈಗ ಪಾಕಿಸ್ತಾನದ ಭಾಗವಾಗಿರುವ ಪಶ್ಚಿಮ ಪಂಜಾಬ್ನ ಗಾಹ್ ಗ್ರಾಮದಲ್ಲಿ ಜನಿಸಿದ್ದರು. ಡಾ. ಸಿಂಗ್ ಅವರು ಮೆಟ್ರಿಕ್ಯುಲೇಷನ್ ಪರೀಕ್ಷೆಯನ್ನು 1948ರಲ್ಲಿ ಪೂರ್ಣಗೊಳಿಸಿದರು. ಅವರ ಶೈಕ್ಷಣಿಕ ಸಾಧನೆ ಸಿಂಗ್ರನ್ನು ಪಂಜಾಬ್ನಿಂದ ಇಂಗ್ಲೆಂಡ್ ನ ಕೇಂಬ್ರಿಜ್ ವಿಶ್ವವಿದ್ಯಾಲಯಕ್ಕೆ ಕರೆದೊಯ್ಯಿತು. ಅಲ್ಲಿ ಅವರು 1957ರಲ್ಲಿ ಪ್ರಥಮ ದರ್ಜೆಯೊಂದಿಗೆ ಅರ್ಥಶಾಸ್ತ್ರದಲ್ಲಿ ಆನರ್ಸ್ ಪದವಿ ಪಡೆದರು. ನಂತರ ಅವರು 1962ರಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ನಫ್ ಫೀಲ್ಡ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಡಿ.ಫಿಲ್ ಗೌರವ ಪಡೆದರು.
ಡಾ. ಮನಮೋಹನಸಿಂಗ್ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಹಾಗೂ ದಿಲ್ಲಿಯ ಪ್ರತಿಷ್ಠಿತ ಆರ್ಥಿಕ ಶಾಲೆಯಲ್ಲಿ ಬೋಧಕರಾಗಿಯೂ ಕೆಲಸ ಮಾಡಿದ್ದರು. ಯು.ಎನ್.ಸಿ.ಟಿ.ಎ.ಡಿ. ಸಚಿವಾಲಯದಲ್ಲಿ ಅವರು ಕೆಲಕಾಲ ಸೇವೆ ಸಲ್ಲಿಸಿದ್ದರು. ಇದರ ಫಲವಾಗಿ 1987ರಿಂದ 1990ರವರೆಗೆ ಅವರನ್ನು ಜಿನೀವಾದಲ್ಲಿನ ದಕ್ಷಿಣ ಆಯೋಗಕ್ಕೆ ಮಹಾಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಯಿತು.
(PC : PTI)
1971ರಲ್ಲಿ ಡಾ. ಸಿಂಗ್ ಅವರು ವಾಣಿಜ್ಯ ಸಚಿವಾಲಯದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇರ್ಪಡೆಗೊಂಡರು. 1972ರಲ್ಲಿ ಇವರನ್ನು ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರರಾಗಿ ನೇಮಕ ಮಾಡಲಾಯಿತು. ಹಣಕಾಸು ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ, ಪ್ರಧಾನಮಂತ್ರಿಗಳ ಸಲಹೆಗಾರರಾಗಿ, ವಿಶ್ವವಿದ್ಯಾಲಯ ಅನುದಾನ ಆಯೋಗದ ಅಧ್ಯಕ್ಷರಾಗಿ ಸರಕಾರದ ವಿವಿಧ ಹುದ್ದೆಗಳಲ್ಲಿ ಉನ್ನತ ಸ್ಥಾನವನ್ನು ಅವರು ಅಲಂಕರಿಸಿದ್ದರು.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಅವರು ರಾಜ್ಯಸಭಾ ಸದಸ್ಯರಾದರು. 1991ರಿಂದ 1996ರವರೆಗೆ ಡಾ. ಸಿಂಗ್ ಕೇಂದ್ರ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದರು. ಈ ಅವಧಿಯು ಸ್ವತಂತ್ರ ಭಾರತದ ಆರ್ಥಿಕ ಇತಿಹಾಸದಲ್ಲಿ ಒಂದು ಮಹತ್ವದ ತಿರುವು ಮೂಡಿಸಿತು. ವಿತ್ತ ಸಚಿವರಾಗಿ ಅವರು ಕೈಗೊಂಡ ಆರ್ಥಿಕ ಸುಧಾರಣೆಗಳಿಗೆ ಇವತ್ತಿಗೂ ಜಾಗತಿಕ ಮನ್ನಣೆ ಇದೆ.
ಡಾ.ಸಿಂಗ್ ಅವರು 1991ರಿಂದ 2024ರ ಆರಂಭದ ವರೆಗೂ ಸಂಸತ್ತಿನ ಮೇಲ್ಮನೆ (ರಾಜ್ಯಸಭಾ) ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. 1998ರಿಂದ 2004ರವರೆಗೆ ಅವರು ರಾಜ್ಯಸಭಾದ ಪ್ರತಿಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದರು.
(PC: PTI)
2004ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಿತು. ಸೋನಿಯಾಗಾಂಧಿ ಅವರು ಪ್ರಧಾನಿಯಾಗಿ ಮನಮೋಹನ್ ಸಿಂಗ್ ಅವರ ಹೆಸರನ್ನು ಸೂಚಿಸಿದರು. ಡಾ. ಮನಮೋಹನ್ ಸಿಂಗ್ ಅವರು, 2004ರ ಮೇ 22ರಂದು ಭಾರತದ ಪ್ರಧಾನಮಂತ್ರಿಗಳಾಗಿ ಅಧಿಕಾರವಹಿಸಿಕೊಂಡರು.
ಭಾರತದ 14 ನೇ ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್ ಅವರು ಒಂದು ದಶಕದ ಅಸಾಧಾರಣ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಮುಂಚೂಣಿ ಪಾತ್ರವನ್ನು ವಹಿಸಿದ್ದರು.
ಡಾ.ಸಿಂಗ್ ಅವರ ಉಸ್ತುವಾರಿಯಲ್ಲಿ, ಭಾರತವು ತನ್ನ ಇತಿಹಾಸದಲ್ಲಿ ಅತ್ಯಧಿಕ ಬೆಳವಣಿಗೆ ದರವನ್ನು ಕಂಡಿತು, ಆರ್ಥಿಕತೆಯು ಸರಾಸರಿ ಶೇ.7.7ರಷ್ಟು ಪ್ರಗತಿಯನ್ನು ಸಾಧಿಸಿತು. ದೇಶವು ಸುಮಾರು ಎರಡು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಮಾರ್ಪಟ್ಟಿತು.
ಪ್ರಧಾನಿಯಾಗಿ ಡಾ. ಸಿಂಗ್ರ ಆಡಳಿತಾವಧಿಯಲ್ಲಿ ನಾಗರಿಕರಿಗೆ ಆಹಾರದ ಕಾನೂನು ಹಕ್ಕು, ಶಿಕ್ಷಣದ ಹಕ್ಕು, ಕೆಲಸ ಮಾಡುವ ಹಕ್ಕು ಮತ್ತು ಮಾಹಿತಿ ಹಕ್ಕುಗಳನ್ನು ಖಾತ್ರಿಪಡಿಸುವ ಮಸೂದೆಗಳನ್ನು ಜಾರಿಗೊಳಿಸಲಾಯಿತು. ಡಾ.ಸಿಂಗ್ ಅವರ ಹಕ್ಕು ಆಧಾರಿತ ಕ್ರಾಂತಿಯು ಭಾರತೀಯ ರಾಜಕೀಯದಲ್ಲಿ ಹೊಸ ಯುಗವನ್ನು ಸೃಷ್ಟಿಸಿತು.
(PC: PTI)
2009ರಲ್ಲಿ ಕಾಂಗ್ರೆಸ್ ಪಕ್ಷವು ಇತರ ಪಕ್ಷಗಳ ಬೆಂಬಲದೊಂದಿಗೆ ಸರಕಾರ ರಚಿಸಿದಾಗ ಅವರು ಮತ್ತೊಮ್ಮೆ ಪ್ರಧಾನಿಯಾದರು. ಹಣದುಬ್ಬರ ಹಾಗೂ ಗಣಿಹಗರಣ, ಕಾಮನ್ವೆಲ್ತ್ ಗೇಮ್ಸ್ ಹಾಗೂ 2ಜಿ ಹಗರಣದಂತಹ ಭ್ರಷ್ಟಾಚಾರ ಪ್ರಕರಣಗಳು ಅವರ ಸರಕಾರದ ವರ್ಚಸ್ಸಿಗೆ ಕುಂದುತಂದರೂ, ಮನಮೋಹನ್ ಸಿಂಗ್ ಅವರು ವಿವಾದಾತೀರರಾಗಿದ್ದರು. ಯಾವುದೇ ಭ್ರಷ್ಟಾಚಾರದ ಕಳಂಕ ಅವರನ್ನು ಆವರಿಸಲಿಲ್ಲ.
ಮನಮೋಹನ್ಸಿಂಗ್ ಪ್ರಧಾನಿಯಾಗಿದ್ದಾಗ ಜಾರಿಗೆ ತಂದ ವಿಶಿಷ್ಟ ಗುರುತುಚೀಟಿ (ಆಧಾರ್), ಇಡೀ ಭಾರತದ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸಿದೆ.
ಅರ್ಥಶಾಸ್ತ್ರಜ್ಞನಾಗಿ, ರಾಜಕಾರಣಿಯಾಗಿ ಮನಮೋಹನ್ ಸಿಂಗ್ ಅವರು ಹಲವಾರು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. 1987ರಲ್ಲಿ ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ನೀಡಲಾಯಿತು.
ಅಧಿಕಾರದಿಂದ ನಿರ್ಗಮಿಸಿದ ಬಳಿಕವೂ ಅವರು ಭಾರತ ರಾಜಕಾರಣದ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿಯೇ ಉಳಿದುಕೊಂಡಿದ್ದರು.
ಭಾರತವನ್ನು ಸರಕಾರದ ನಿಯಂತ್ರಣವಿರುವ ಆರ್ಥಿಕತೆಯ ರಾಷ್ಟ್ರವೆಂಬ ಹಣೆಪಟ್ಟಿಯಿಂದ ಮಾರುಕಟ್ಟೆ ಕೇಂದ್ರೀತ ಆರ್ಥಿಕವಾಗಿ ಮನಮೋಹನ್ ಸಿಂಗ್ ಕೊಂಡೊಯ್ದರು. ಅವರು ತಂದ ಸುಧಾರಣೆಗಳು ದೇಶವನ್ನು ಆರ್ಥಿಕ ಪತನದಿಂದ ರಕ್ಷಿಸಿದವು. ಅಲ್ಲದೆ ದೇಶದ ಸುಸ್ಥಿರ ಬೆಳವಣಿಗೆಗೆ ತಳಹದಿಯನ್ನು ಹಾಕಿತು ಹಾಗೂ ಜಾಗತಿಕ ಏಕತೆಯನ್ನು ಹೆಚ್ಚಿಸಿತು. ಅವರ ಆಡಳಿತಾವಧಿಯಲ್ಲಿ ದೇಶವು ಔದ್ಯಮಿಕ ಸಂಸ್ಕೃತಿಯು ಪೋಷಿಸಲ್ಪಟ್ಟತು. ಮಧ್ಯಮವರ್ಗದ ಬೆಳವಣಿಗೆಗೂ ಕಾರಣವಾಯಿತು.
ಮನೋಹನ್ಸಿಂಗ್ ಅವರ ಪತ್ನಿ ಗುರುಶರಣ್ ಕೌರ್ ಹಾಗೂ ದಂಪತಿಗೆ ಮೂವರು ಪುತ್ರಿಯರಿದ್ದಾರೆ. ಕಠಿಣ ಪರಿಶ್ರಮ ಮತ್ತು ಅವರ ವಿನಮ್ರ, ಮೃದುಭಾಷಿ ವ್ಯಕ್ತಿತ್ವದ ಡಾ. ಮನಮೋಹನ್ ಸಿಂಗ್ ಅವರು ಭಾರತವನ್ನು ಜಾಗತಿಕ ಆರ್ಥಿಕ ಶಕ್ತಿಯ ರಾಷ್ಟ್ರವಾಗಿ ರೂಪುಗೊಳಿಸಿದ ಧೀಮಂತ ರಾಜಕಾರಣಿಯಾಗಿ ಸದಾ ನೆನಪಿನಲ್ಲಿ ಉಳಿಯಲ್ಲಿದ್ದಾರೆ.
ಅಪಾರ ಸಾಧನೆಗಳ ಮೇರು ವ್ಯಕ್ತಿತ್ವ
ಡಾ.ಮನಮೋಹನ್ಸಿಂಗ್ ಅವರು 1991 ರಿಂದ 2024ರ ಆರಂಭದವರೆಗೆ ರಾಜ್ಯಸಭೆಯ ಸದಸ್ಯರಾಗಿದ್ದರು. ಅಲ್ಲಿ ಅವರು 1998-2004 ರವರೆಗೆ ವಿರೋಧ ಪಕ್ಷದ ನಾಯಕರಾಗಿದ್ದರು. 2004 ಮತ್ತು 2009ರಲ್ಲಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದರು.
ಡಾ.ಸಿಂಗ್ ಅವರ ಅಭಿವೃದ್ಧಿಗೆ ಬದ್ಧತೆ ಮತ್ತು ಅವರ ಅನೇಕ ಸಾಧನೆಗಳನ್ನು ಅವರಿಗೆ ನೀಡಲಾದ ಅನೇಕ ಗೌರವಗಳ ಮೂಲಕ ಗುರುತಿಸಲಾಗಿದೆ. ಇವುಗಳಲ್ಲಿ 1987 ರಲ್ಲಿ ಪದ್ಮವಿಭೂಷಣ, 1993ರಲ್ಲಿ ವರ್ಷದ ಹಣಕಾಸು ಮಂತ್ರಿಗಾಗಿ ಯುರೋ ಮನಿ ಪ್ರಶಸ್ತಿ, 1993 ಮತ್ತು 1994 ಎರಡರಲ್ಲೂ ವರ್ಷದ ಹಣಕಾಸು ಮಂತ್ರಿಗಾಗಿ ಏಶ್ಯ ಮನಿ ಪ್ರಶಸ್ತಿ ಮತ್ತು 1995 ರಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್ನ ಜವಾಹರಲಾಲ್ ನೆಹರೂ ಜನ್ಮ ಶತಮಾನೋತ್ಸವ ಪ್ರಶಸ್ತಿ ಸೇರಿವೆ.
ಇದರಲ್ಲಿ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮ ವಿಭೂಷಣ (1987) ಸೇರಿದೆ. ಜೊತೆಗೆ ವಿಜ್ಞಾನ ಕಾಂಗ್ರೆಸ್ ನ ಜವಾಹರಲಾಲ್ ನೆಹರೂ ಜನ್ಮ ಶತಮಾನೋತ್ಸವ ಪ್ರಶಸ್ತಿ (1995), ಹಣಕಾಸು ಸಚಿವರಿಗೆ ನೀಡುವ ಏಶ್ಯ ವಿತ್ತ ಪ್ರಶಸ್ತಿ (1993 ಮತ್ತು 1994) ಹಣಕಾಸು ಸಚಿವರಿಗೆ ನೀಡುವ ಯೂರೋ ಹಣ ಪ್ರಶಸ್ತಿ (1993), ಕೇಂಬ್ರಿಜ್ ವಿಶ್ವವಿದ್ಯಾಲಯದ ಆಡಮ್ ಸ್ಮಿತ್ ಬಹುಮಾನ (1956), ಕೇಂಬ್ರಿಜ್ ನ ಸೈಂಟ್ ಜಾನ್ ಕಾಲೇಜಿನಲ್ಲಿ ಅತ್ಯತ್ತುಮ ಸಾಧನೆಗಾಗಿ ರೈಟ್ಸ್ ಪ್ರಶಸ್ತಿ (1955) ಲಭಿಸಿದೆ. ಇದರ ಜೊತೆಗೆ ಜಪಾನೀಸ್ ನಿಹಾನ್ ಕೇಜೈ ಶಿಂಬುನ್ ಗೌರವ ಸೇರಿದಂತೆ ಹಲವು ಸಂಸ್ಥೆಗಳ ಪ್ರಶಸ್ತಿಯೂ ಲಭಿಸಿದೆ. ಅಕ್ಸ್ ಫರ್ಡ್ ಮತ್ತು ಕೇಂಬ್ರಿಜ್ ವಿಶ್ವವಿದ್ಯಾಲಯ ಸೇರಿದಂತೆ ಹಲವು ವಿಶ್ವವಿದ್ಯಾಲಯಗಳ ಗೌರವ ಪದವಿಗೂ ಡಾ. ಸಿಂಗ್ ಪಾತ್ರರಾಗಿದ್ದಾರೆ. ಡಾ. ಸಿಂಗ್ ಅವರು ಹಲವು ಅಂತರ್ರಾಷ್ಟ್ರೀಯ ಸಮಾವೇಶಗಳಲ್ಲಿ ಮತ್ತು ಹಲವು ಅಂತರ್ರಾಷ್ಟ್ರೀಯ ಸಂಘಟನೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 1993ರಲ್ಲಿ ಸೈಪ್ರಸ್ ನಲ್ಲಿ ನಡೆದ ಕಾಮನ್ ವೆಲ್ತ್ ಸರಕಾರದ ಮುಖ್ಯಸ್ಥರ ಸಭೆ ಹಾಗೂ 1993ರಲ್ಲಿ ವಿಯನ್ನಾದಲ್ಲಿ ನಡೆದ ವಿಶ್ವ ಮಾನವ ಹಕ್ಕುಗಳ ಸಮಾವೇಶದಲ್ಲಿ ಪಾಲ್ಗೊಂಡ ಭಾರತೀಯ ನಿಯೋಗದ ನೇತೃತ್ವವನ್ನು ಡಾ. ಸಿಂಗ್ ವಹಿಸಿದ್ದರು.