ಶರದ್ ಪವಾರ್ ನೇತೃತ್ವದ ಪಕ್ಷಕ್ಕೆ ನೂತನ ಹೆಸರು ನೀಡಿದ ಚುನಾವಣಾ ಆಯೋಗ

Update: 2024-02-07 17:19 GMT

ಶರದ್ ಪವಾರ್ (PTI)

ಹೊಸದಿಲ್ಲಿ: ಹಿರಿಯ ರಾಜಕಾರಣಿ ಶರದ್ ಪವಾರ್ ನೇತೃತ್ವದ ಪಕ್ಷಕ್ಕೆ ಬುಧವಾರ ಭಾರತೀಯ ಚುನಾವಣಾ ಆಯೋಗವು ನೂತನ ಹೆಸರು ಹಾಗೂ ಚಿಹ್ನೆಯನ್ನು ನಿಗದಿಗೊಳಿಸಿದೆ. ಶರದ್ ಪವಾರ್ ನೇತೃತ್ವದ ಪಕ್ಷವು ಇನ್ನು ಮುಂದೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಶರದ್‌ಚಂದ್ರ ಪವಾರ್) ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಶರದ್ ಪವಾರ್ ಅಳಿಯ ಅಜಿತ್ ಪವಾರ್ ನೇತೃತ್ವದ ಪಕ್ಷವೇ ನೈಜ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಎಂದು ಘೋಷಿಸಿ, ಅವರ ಪಕ್ಷಕ್ಕೆ ಗಡಿಯಾರದ ಚಿಹ್ನೆಯನ್ನು ಒದಗಿಸಿದ ಮರುದಿನ ಈ ಪ್ರಕಟಣೆ ಹೊರಬಿದ್ದಿದೆ.

ಮಹಾರಾಷ್ಟ್ರದಲ್ಲಿ ನಡೆಯಲಿರುವ ಮುಂಬರುವ ರಾಜ್ಯಸಭಾ ಚುನಾವಣೆಯ ಆರು ಸ್ಥಾನಗಳಿಗಾಗಿ ನಾವು ನಿಮ್ಮ ಗುಂಪು/ಬಣದ ಹೆಸರನ್ನು ಒಂದು ಬಾರಿಯ ಆಯ್ಕೆಯಾಗಿ ಸ್ವೀಕರಿಸಿದ್ದೇವೆ ಎಂದು ಚುನಾವಣಾ ಆಯೋಗ ಹೇಳಿದೆ.

ಆದರೆ, ಚುನಾವಣಾ ಆಯೋಗವು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಶರದ್‌ಚಂದ್ರ ಪವಾರ್)ಕ್ಕೆ ಇದುವರೆಗೆ ಯಾವುದೇ ಚಿಹ್ನೆಯನ್ನು ನಿಗದಿಗೊಳಿಸಿಲ್ಲ ಎಂದು ಮೂಲಗಳು ತಿಳಿಸಿದ್ದು, ಅದರ ಮುಂದೆ ತಮಿಳುನಾಡಿನ ಆಡಳಿತಾರೂಢ ಪಕ್ಷವಾದ ಡಿಎಂಕೆ ಬಳಿಯಿರುವ ಉದಯಿಸುತ್ತಿರುವ ಸೂರ್ಯ, ಭಾರತೀಯ ರಾಷ್ಟ್ರೀಯ ಲೋಕದಳ ಬಳಸುತ್ತಿರುವ ಎರಡು ಕನ್ನಡಕಗಳು ಅಥವಾ ಆಲದ ಮರದ ಚಿಹ್ನೆಯ ಆಯ್ಕೆ ಇದೆ.

ಇದಕ್ಕೂ ಮುನ್ನ, ಮಂಗಳವಾರದಂದು ತಮ್ಮ ಮಾವ ಶರದ್ ಪವಾರ್ ಅವರಿಂದ ಕಳೆದ ವರ್ಷದ ಜುಲೈ ತಿಂಗಳಲ್ಲಿ ಬೇರ್ಪಟ್ಟಿದ್ದ ಅಜಿತ್ ಪವಾರ್ ಬಣದ ಬಳಿ ಹೆಚ್ಚು ಶಾಸಕರಿರುವುದರಿಂದ, ಅವರು ಪಕ್ಷದ ಮೂಲ ಹೆಸರು ಹಾಗೂ ಚಿಹ್ನೆಯನ್ನು ತಮ್ನ ಬಳಿಯೇ ಉಳಿಸಿಕೊಳ್ಳಬಹುದು ಎಂದು ಚುನಾವಣಾ ಆಯೋಗ ಹೇಳಿತ್ತು.

ಈ ನಡುವೆ, ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗುವುದು ಎಂದು ಶರದ್ ಪವಾರ್ ಬಣದ ನಾಯಕರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News