ಚುನಾವಣಾ ಬಾಂಡ್ ದೇಶದ ಅತಿ ದೊಡ್ಡ ಹಗರಣ : ಬಿಜೆಪಿ ವಿರುದ್ಧ ಸಂಜಯ ರಾವುತ್ ವಾಗ್ದಾಳಿ

Update: 2024-03-15 16:38 GMT

 ಸಂಜಯ ರಾವುತ್ : Photo: ANI 

ಹೊಸದಿಲ್ಲಿ : ಬಿಜೆಪಿಯು ಗೇಮಿಂಗ್ ಮತ್ತು ಗ್ಯಾಂಬ್ಲಿಂಗ್ ಕಂಪನಿಗಳು ಖರೀದಿಸಿದ್ದ ಚುನಾವಣಾ ಬಾಂಡ್‌ ಗಳ ಪ್ರಮುಖ ಫಲಾನುಭವಿಯಾಗಿದೆ ಎಂದು ಶಿವಸೇನೆ (ಉದ್ಧವ ಠಾಕ್ರೆ) ನಾಯಕ ಸಂಜಯ ರಾವುತ್ ಅವರು ಶುಕ್ರವಾರ ಆರೋಪಿಸಿದರು. ಬಿಜೆಪಿಯು ದೇಶದ ಅತ್ಯಂತ ದೊಡ್ಡ ಹಗರಣದಲ್ಲಿ ಭಾಗಿಯಾಗಿದೆ ಎಂದೂ ಅವರು ಆಪಾದಿಸಿದರು.

ರಾವುತ್ ಪ್ರಕಾರ,ಯೋಜನೆಯು ಗೇಮಿಂಗ್ ಮತ್ತು ಗ್ಯಾಂಬ್ಲಿಂಗ್ ಕಂಪನಿಗಳಿಂದ ಚುನಾವಣಾ ಬಾಂಡ್‌ ಗಳ ಖರೀದಿ ಮತ್ತು ಬಿಜೆಪಿಯ ಬ್ಯಾಂಕ್ ಖಾತೆಗಳಿಗೆ ಹಣದ ನೇರ ವರ್ಗಾವಣೆಯನ್ನು ಒಳಗೊಂಡಿತ್ತು.

ಗೇಮಿಂಗ್ ಮತ್ತು ಗ್ಯಾಂಬ್ಲಿಂಗ್ ಕಂಪನಿಗಳು ಚುನಾವಣಾ ಬಾಂಡ್‌ ಗಳನ್ನು ಖರೀದಿಸುತ್ತಿದ್ದವು ಮತ್ತು ಬಳಿಕ ಅವುಗಳನ್ನು ಬಿಜೆಪಿಯ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದ್ದವು. ಮೇಘಾ ಇಂಜಿನಿಯರಿಂಗ್ ಅಸಂಖ್ಯಾತ ಗುತ್ತಿಗೆಗಳನ್ನು ಪಡೆಯುತ್ತಿತ್ತು ಮತ್ತು ಪ್ರತಿಫಲವಾಗಿ ಲಕ್ಷಾಂತರ ಚುನಾವಣಾ ಬಾಂಡ್‌ ಗಳನ್ನು ಖರೀದಿಸಿ ಹಣವನ್ನು ರಾಜಕೀಯ ಪಕ್ಷಗಳಿಗೆ ವರ್ಗಾಯಿಸುತ್ತಿತ್ತು. ಇದು ದೇಶದ ಅತ್ಯಂತ ದೊಡ್ಡ ಹಗರಣವಾಗಿದೆ ಎಂದು ರಾವುತ್ ಹೇಳಿದರು.

ಕಂಪನಿಗಳ ಮೇಲೆ ಇತ್ತೀಚಿನ ಜಾರಿ ನಿರ್ದೇಶನಾಲಯ(ಈಡಿ)ದ ದಾಳಿಗಳಿಗೂ ಮತ್ತು ನಂತರ ಅವುಗಳಿಂದ ಚುನಾವಣಾ ಬಾಂಡ್‌ ಗಳ ಖರೀದಿಗೂ ಸಂಬಂಧವಿದೆ ಎಂದು ಹೇಳಿದ ಆರ್ ಜೆ ಡಿ ಸಂಸದ ಮನೋಜ ಝಾ, ಅದನ್ನು ಜನರು ಈಗ ನೋಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ಇದು ಈಗಾಗಲೇ ತಿಳಿದಿದೆ. ಈಡಿ ದಾಳಿಗಳನ್ನು ನಡೆಸುತ್ತದೆ ಮತ್ತು ಕೆಲವೇ ಗಂಟೆಗಳ ಬಳಿಕ ಚುನಾವಣಾ ಬಾಂಡ್‌ ಗಳ ಖರೀದಿ ನಡೆಯುತ್ತಿದೆ. ಇವುಗಳ ನಡುವಿನ ಸಂಬಂಧವನ್ನು ಗಮನಿಸಬೇಕು ಎಂದರು.

ಚುನಾವಣಾ ಬಾಂಡ್‌ ಗಳ ಕುರಿತು ಕಳವಳ ವ್ಯಕ್ತಪಡಿಸಿದ ರಾಜ್ಯಸಭಾ ಸದಸ್ಯ ಕಪಿಲ ಸಿಬಲ್ ಅವರು, ಯಾವುದೇ ತನಿಖಾ ಸಂಸ್ಥೆ ಈ ಬಗ್ಗೆ ತನಿಖೆ ನಡೆಸುವುದಿಲ್ಲ ಎಂದು ಒತ್ತಿ ಹೇಳಿದರು.

‘ಈಡಿ ಮತ್ತು ಸಿಬಿಐ ಈಗ ನಿದ್ರಿಸುತ್ತಿವೆ. ಇದು ಪ್ರತಿಪಕ್ಷಗಳ ವಿರುದ್ಧವಾಗಿದ್ದರೆ ಅವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದವು. ಅವು ಅತಿಯಾದ ಪ್ರಮಾಣದಲ್ಲಿ ನಿದ್ರೆಮಾತ್ರೆಗಳನ್ನು ಸೇವಿಸಿವೆ. ಯಾರೋ ಒಬ್ಬರು (ಪ್ರಧಾನಿ ಮೋದಿಯನ್ನು ಪ್ರಸ್ತಾವಿಸಿ) ‘ನಾ ಖಾವೂಂಗಾ ನಾ ಖಾನೆ ದೂಂಗಾ’ ಎಂದು ಹೇಳಿದ್ದು ನಿಮಗೆ ನೆನಪಿರಬಹುದು. ಈ ಬಡಾಯಿ ಏನಾಯಿತು? ಸ್ವಿಸ್ ಬ್ಯಾಂಕ್ ಗಳಿಂದ ಕಪ್ಪುಹಣವನ್ನು ವಾಪಸ್ ತರುವುದಾಗಿ ಮತ್ತು ಜನರ ಬ್ಯಾಂಕ್ ಖಾತೆಗಳಿಗೆ ತಲಾ 15 ಲಕ್ಷ ರೂ.ಜಮಾ ಮಾಡುವುದಾಗಿ ಯಾರೋ ಒಬ್ಬರು (ಮೋದಿ) ಹೇಳಿದ್ದರು, ಆದರೆ ಆ ಹಣವನ್ನು ಅವರು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿರುವಂತಿದೆ. ನನ್ನ ಅಭಿಪ್ರಾಯದಲ್ಲಿ ಯಾವುದೇ  ತನಿಖಾ ಸಂಸ್ಥೆಯು ಇದನ್ನು ತನಿಖೆ ನಡೆಸುವ ಗೋಜಿಗೆ ಹೋಗುವುದಿಲ್ಲ.ಈಗ ತಾನೇನು ಮಾಡಬೇಕು ಮತ್ತು ಯಾವ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ತೀರ್ಮಾನಿಸುವುದು ನ್ಯಾಯಾಲಯದ ಹೊಣೆಯಾಗಿದೆ ’ ಎಂದು ಸಿಬಲ್ ಹೇಳಿದರು

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News