ಭಂಗಿ, ನೀಚ್, ಭಿಕಾರಿ ಜಾತಿ ಹೆಸರುಗಳಲ್ಲ, ಅವುಗಳ ಬಳಕೆ SC/ST ಕಾಯ್ದೆಯಡಿ ಆರೋಪಗಳನ್ನು ಸಮರ್ಥಿಸುವುದಿಲ್ಲ: ರಾಜಸ್ಥಾನ ಹೈಕೋರ್ಟ್
ಜೈಪುರ: ಭಂಗಿ, ನೀಚ್, ಭಿಕಾರಿ ಮತ್ತು ಮಂಗಾನಿ ( ಭಿಕ್ಷುಕ, ಕೀಳು ವ್ಯಕ್ತಿ)ಯಂತಹ ಪದಗಳು ಜಾತಿಗಳ ಹೆಸರುಗಳಲ್ಲ ಮತ್ತು ಅವುಗಳ ಬಳಕೆಯು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಆರೋಪಗಳನ್ನು ಸಮರ್ಥಿಸುವುದಿಲ್ಲ ಎಂದು ರಾಜಸ್ಥಾನ ಉಚ್ಚ ನ್ಯಾಯಾಲಯವು ಇತ್ತೀಚಿಗೆ ಎತ್ತಿ ಹಿಡಿದಿದೆ.
ಕೆಲವು ಅತಿಕ್ರಮಣಗಳನ್ನು ಪರಿಶೀಲಿಸಲು ಮತ್ತು ತೆರವುಗೊಳಿಸಲು ಬಂದಿದ್ದ ಸರಕಾರಿ ನೌಕರರ ವಿರುದ್ಧ ಇಂತಹ ಪದಗಳನ್ನು ಬಳಸಿದ್ದ ಆರೋಪ ಎದುರಿಸುತ್ತಿದ್ದ ನಾಲ್ವರು ಅರ್ಜಿದಾರರ ವಿರುದ್ಧದ ಎಸ್‌ಸಿ/ಎಸ್‌ಟಿ ಕಾಯ್ದೆ ಆರೋಪಗಳನ್ನು ಕೈಬಿಟ್ಟ ನ್ಯಾ.ಬೀರೇಂದ್ರ ಕುಮಾರ್ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಅರ್ಜಿದಾರರು ಬಳಸಿದ್ದ ಪದಗಳು ಯಾವುದೇ ಜಾತಿಯನ್ನು ಉಲ್ಲೇಖಿಸಿರಲಿಲ್ಲ ಅಥವಾ ಅರ್ಜಿದಾರರು ಜಾತಿಯ ಆಧಾರದಲ್ಲಿ ಯಾವುದೇ ಅಧಿಕಾರಿಯನ್ನು ಅವಮಾನಿಸಲು ಉದ್ದೇಶಿಸಿದ್ದರು ಎನ್ನುವುದಕ್ಕೆ ಯಾವುದೇ ಪುರಾವೆಯಿಲ್ಲ ಎಂದು ನ್ಯಾಯಾಲಯವು ಹೇಳಿತು.
ಪ್ರಕರಣವು ಜನವರಿ 2011ರಲ್ಲಿ ಜೈಸಲ್ಮೇರ್‌ನಲ್ಲಿ ನಡೆದಿದ್ದ ಘಟನೆಗೆ ಸಂಬಂಧಿಸಿದೆ. ಸರಕಾರಿ ಭೂಮಿಯನ್ನು ಅತಿಕ್ರಮಿಸಲಾಗಿದೆ ಎಂಬ ಆರೋಪದ ಪರಿಶೀಲನೆಗಾಗಿ ಕೆಲವು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅರ್ಜಿದಾರರು ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಯನ್ನುಂಟು ಮಾಡಿದ್ದರು ಮತ್ತು ಅವಹೇಳನಕಾರಿ ಪದಗಳಿಂದ ನಿಂದಿಸಿದ್ದರು ಎಂದು ಆರೋಪಿಸಲಾಗಿತ್ತು. ಅರ್ಜಿದಾರರ ವಿರುದ್ಧ ಐಪಿಸಿ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದಯಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿದಾರರು ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.
ಅಧಿಕಾರಿಗಳ ಜಾತಿಯ ಬಗ್ಗೆ ತಮಗೆ ತಿಳಿದಿರಲಿಲ್ಲ ಮತ್ತು ತಾವು ಅವರ ಜಾತಿ ನಿಂದನೆ ಮಾಡಿದ್ದೆವು ಎನ್ನುವುದಕ್ಕೆ ಯಾವುದೇ ಸ್ವತಂತ್ರ ಸಾಕ್ಷಿಯಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.
ಉಚ್ಚ ನ್ಯಾಯಾಲಯವು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಆರೋಪಗಳನ್ನು ಕೈಬಿಟ್ಟು ಅರ್ಜಿಯನ್ನು ಭಾಗಶಃ ಪುರಸ್ಕರಿಸಿದೆಯಾದರೂ ಅರ್ಜಿದಾರರು ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಮತ್ತು ಹಲ್ಲೆ ಆರೋಪಗಳಲ್ಲಿ ಐಪಿಸಿಯಡಿ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದೆ.