ಬಿಜೆಪಿ ಸಂಸದನ ಔತಣಕೂಟದಲ್ಲಿ ಮಟನ್ ತುಂಡಿಗಾಗಿ ಕೋಲಾಹಲ, ಹೊಡೆದಾಟ

Update: 2024-11-16 10:46 GMT

ಸಾಂದರ್ಭಿಕ ಚಿತ್ರ (credit: freepik.com)

ವಾರಣಾಸಿ(ಉತ್ತರ ಪ್ರದೇಶ): ಬಿಜೆಪಿಯ ಭದೋಹಿ ಸಂಸದ ವಿನೋದ್ ಕುಮಾರ್ ಬಿಂದ್ ಅವರು ಮಿರ್ಜಾಪುರದ ಕರ್ಸಡಾದಲ್ಲಿಯ ತನ್ನ ಕಚೇರಿಯಲ್ಲಿ ಏರ್ಪಡಿಸಿದ್ದ ಔತಣ ಕೂಟವು ಕೆಲವು ಅತಿಥಿಗಳು ತಮಗೆ ಬಡಿಸಲಾದ ಮಟನ್ ಸಾರಿನಲ್ಲಿ ತುಂಡುಗಳೇ ಇಲ್ಲ ಎಂದು ಆರೋಪಿಸುವುದರೊಂದಿಗೆ ರಣಾಂಗಣವಾಗಿ ಪರಿಣಮಿಸಿತ್ತು. ಈ ಅತಿಥಿಗಳು ಮಟನ್ ಬಡಿಸುತ್ತಿದ್ದ ಯುವಕನಿಗೆ ಕಪಾಳಮೋಕ್ಷವನ್ನೂ ಮಾಡಿದ್ದು,ಹಿರಿಯ ಬಿಜೆಪಿ ನಾಯಕರು ಮತ್ತು ಸ್ಥಳೀಯರು ಮಧ್ಯಪ್ರವೇಶಿಸುವವರೆಗೂ ಹಲವಾರು ನಿಮಿಷಗಳ ಕಾಲ ಕೋಲಾಹಲ ಮುಂದುವರಿದಿತ್ತು ಎಂದು Times of India ವರದಿ ಮಾಡಿದೆ.

ವರದಿಗಳ ಪ್ರಕಾರ ಊಟದ ಪಂಕ್ತಿಯಲ್ಲಿ ಕುಳಿತಿದ್ದ ಯುವಕನೋರ್ವನಿಗೆ ಬಡಿಸಲಾಗಿದ್ದ ಮಟನ್ ಕರಿಯಲ್ಲಿ ಒಂದೇ ಒಂದು ಮಾಂಸದ ತುಂಡು ಇರಲಿಲ್ಲ. ಈ ಬಗ್ಗೆ ಕರಿಯನ್ನು ಬಡಿಸಿದ್ದ ವ್ಯಕ್ತಿಯನ್ನು ಪ್ರಶ್ನಿಸಿದಾಗ ಆತ ತೃಪ್ತಿಕರ ಉತ್ತರ ನೀಡಿರಲಿಲ್ಲ. ಇದರಿಂದ ಕುಪಿತಗೊಂಡ ಯುವಕ ವ್ಯಕ್ತಿಯನ್ನು ನಿಂದಿಸಿದ್ದಲ್ಲದೆ ಕೆನ್ನೆಗೆ ಒಂದೇಟನ್ನೂ ಬಿಗಿದಿದ್ದ. ಇದು ಯುವಕನ ಸಹಚರರು ಮತ್ತು ಕೇಟರಿಂಗ್ ಸಿಬ್ಬಂದಿಗಳ ನಡುವೆ ಘರ್ಷಣೆಗೆ ಕಾರಣವಾಗಿದ್ದು,ಇತರ ಅತಿಥಿಗಳು ಊಟ ಬಿಟ್ಟು ಹೋಗುವಂತಾಗಿತ್ತು.

ಶುಕ್ರವಾರ ಮಜ್ವಾನ್‌ನಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಬಹಿರಂಗ ಸಭೆಯಲ್ಲಿ ಎದುರಾಗಿದ್ದ ಸಂಸದ ವಿನೋದ್ ಕುಮಾರ್ ಬಿಂದ್ ಅವರನ್ನು ಪತ್ರಕರ್ತರು ನೀತಿ ಸಂಹಿತೆ ಜಾರಿಯಲ್ಲಿರುವಾಗ ಔತಣ ಕೂಟ ಏರ್ಪಡಿಸಿದ್ದನ್ನು ಪ್ರಶ್ನಿಸಿದ್ದರು, ಬಿಂದ್ ಪ್ರತಿಕ್ರಿಯಿಸಲು ನಿರಾಕರಿಸಿದ್ದರು.

ಹೆಚ್ಚಿನ ಆಹ್ವಾನಿತರ ಊಟ ಮುಗಿದಿದ್ದರಿಂದ ರಾತ್ರಿ 8:30ರ ಬಳಿಕ ಔತಣ ಕೂಟವನ್ನು ಮುಗಿಸಲು ಸಿದ್ಧತೆಗಳು ನಡೆಯುತ್ತಿದ್ದವು. ಈ ವೇಳೆ ಕಂಟ್ರಿ ಸಾರಾಯಿ ಸೇವಿಸಿದ್ದ ಕೆಲವು ಯುವಕರು ಆಹ್ವಾನಿತರಿಗೆ ಸೀಮಿತವಾಗಿದ್ದ ಔತಣ ಕೂಟದ ಸ್ಥಳವನ್ನು ಪ್ರವೇಶಿಸಿದ್ದರು ಮತ್ತು ಗಲಾಟೆಯೆಬ್ಬಿಸಿ ಪರಾರಿಯಾಗಿದ್ದಾರೆ ಎಂದು ಸಂಸದರ ಕಚೇರಿಯ ಉಸ್ತುವಾರಿ ಉಮಾಶಂಕರ ಬಿಂದ್ ತಿಳಿಸಿದರು.

2022ರ ವಿಧಾನಸಭಾ ಚುನಾವಣೆಯಲ್ಲಿ ಮಜ್ವಾನ್ ಕ್ಷೇತ್ರದಿಂದ ಆಯ್ಕೆಯಾಗಿದ್ದ ವಿನೋದ್ ಕುಮಾರ್ ಬಿಂದ್ 2024ರ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು,‌ಈ ಕೇತ್ರದಲ್ಲಿ ಉಪಚುನಾವಣೆಯನ್ನು ಅಗತ್ಯವಾಗಿಸಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಗೆದ್ದಿದ್ದ ಸುಚಿಸ್ಮಿತಾ ಮೌರ್ಯ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ನ.20ರಂದು ಈ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News