ಸಂಸತ್ತಿನ ಆವರಣದಲ್ಲಿ ಘರ್ಷಣೆ ಪ್ರಕರಣ: ಗಾಯಗೊಂಡ ಇಬ್ಬರು ಬಿಜೆಪಿ ಸಂಸದರು ಆಸ್ಪತ್ರೆಯಿಂದ ಬಿಡುಗಡೆ

Update: 2024-12-23 16:24 GMT

 ಪ್ರತಾಪ್ ಸಾರಂಗಿ ,  ಮುಖೇಶ್ ರಜಪೂತ್ | PC : X 

ಹೊಸದಿಲ್ಲಿ: ಸಂಸತ್ತಿನ ಆವರಣದಲ್ಲಿ ಎನ್‌ಡಿಎ ಹಾಗೂ ಇಂಡಿಯಾ ಮೈತ್ರಿಕೂಟದ ಸದಸ್ಯರ ನಡುವಿನ ಘರ್ಷಣೆಯ ಸಂದರ್ಭ ತಲೆಗೆ ಗಾಯವಾಗಿ ರಾಮ ಮನೋಹರ ಲೋಹಿಯಾ (ಆರ್‌ಎಂಎಲ್) ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇಬ್ಬರು ಬಿಜೆಪಿ ಸಂಸದರು ಸೋಮವಾರ ಬಿಡುಗಡೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಸತ್ ಆವರಣದಲ್ಲಿ ಡಿಸೆಂಬರ್ 19ರಂದು ನಡೆದ ಘರ್ಷಣೆಯ ಸಂದರ್ಭ ತಲೆಗೆ ಗಾಯವಾದ ಒಡಿಶಾದ ಪ್ರತಾಪ್ ಸಾರಂಗಿ (69) ಹಾಗೂ ಉತ್ತರಪ್ರದೇಶದ ಮುಖೇಶ್ ರಜಪೂತ್ ಅವರನ್ನು ರಾಮ ಮನೋಹರ್ ಲೋಹಿಯಾ (ಆರ್‌ಎಂಎಲ್) ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

ಇಬ್ಬರೂ ಸಂಸದರ ಆರೋಗ್ಯ ಪರಿಸ್ಥಿತಿ ಈಗ ಸುಧಾರಿಸಿದೆ. ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ.

ಅವರನ್ನು ತೀವ್ರ ನಿಗಾ ಘಟಕದಲ್ಲಿ ಪರಿವೀಕ್ಷಣೆಯಲ್ಲಿ ಇರಿಸಲಾಗಿತ್ತು ಹಾಗೂ ಶನಿವಾರ ವಾರ್ಡ್‌ಗೆ ವರ್ಗಾಯಿಸಲಾಗಿತ್ತು. ಸಾರಂಗಿಗೆ ಹೃದ್ರೋಗದ ಸಮಸ್ಯೆ ಇತ್ತು. ಅವರ ಹೃದಯದ ನಾಳಕ್ಕೆ ಸ್ಟಂಟ್ ಅಳವಡಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಎಂಆರ್‌ಐ ಹಾಗೂ ಸಿಟಿ ಸ್ಕ್ಯಾನ್‌ನಲ್ಲಿ ಗಾಯಕ್ಕೆ ಸಂಬಂಧಿಸಿ ಗಮನಾರ್ಹವಾದ ಯಾವುದೂ ಕಂಡು ಬಂದಿಲ್ಲ ಎಂದು ಆರ್‌ಎಂಎಲ್ ಆಸ್ಪತ್ರೆಯ ಡಾ. ಶುಕ್ಲಾ ಎಂ.ಎಸ್. ಅವರು ತಿಳಿಸಿದ್ದಾರೆ. ಸಾರಂಗಿ ಅವರಿಗೆ ಹಣೆಯಲ್ಲಿ ಆಳವಾದ ಗಾಯವಾಗಿದೆ. ಅದಕ್ಕೆ ಹೊಲಿಗೆ ಹಾಕಲಾಗಿದೆ ಎಂದು ಅವರು ಹೇಳಿದ್ದಾರೆ.

ರಜಪೂತ್ ಅವರ ತಲೆಗೆ ಕೂಡ ಗಾಯವಾಗಿತ್ತು. ಅನಂತರ ಅವರು ಪ್ರಜ್ಞೆ ಕಳೆದುಕೊಂಡಿದ್ದರು. ಆದರೆ, ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಪ್ರಜ್ಞೆ ಇತ್ತು. ಅವರ ರಕ್ತದೊತ್ತಡ ಏರಿಕೆಯಾಗಿತ್ತು ಎಂದು ಡಾ. ಶುಕ್ಲಾ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News