ಬಿಜೆಪಿ ನಾಯಕನ ಎನ್‌ಜಿಒಗೆ FCRA ಪರವಾನಗಿ ನೀಡಿದ ಗೃಹ ಸಚಿವಾಲಯ
ಹೊಸದಿಲ್ಲಿ: ಕೇಂದ್ರ ಗೃಹ ಸಚಿವಾಲಯ ಉತ್ತರಪ್ರದೇಶದ ಮಾಜಿ ರಾಜ್ಯಸಭಾ ಸದಸ್ಯ ಡಾ.ಅನಿಲ್ ಕುಮಾರ್ ಜೈನ್ ನೇತೃತ್ವದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ (BSG ಇಂಡಿಯಾ) ಎನ್ ಜಿಒಗೆ ವಿದೇಶಿ ಕೊಡುಗೆ ನೋಂದಣಿ ಕಾಯ್ದೆಯಡಿ (FCRA) ಪರವಾನಗಿಯನ್ನು ನೀಡಿದೆ.
ಡಾ.ಅನಿಲ್ ಕುಮಾರ್ ಜೈನ್ 2018 ರಿಂದ 2024ರ ನಡುವೆ ಬಿಜೆಪಿಯ ಮೇಲ್ಮನೆ ಸದಸ್ಯರಾಗಿದ್ದರು. ಎಫ್ ಸಿಆರ್ ಎ ಪರವಾನಗಿಯನ್ನು ಡಿಸೆಂಬರ್ ತಿಂಗಳ ಆರಂಭದಲ್ಲಿ ನೀಡಲಾಗಿದ್ದು, 2029ರವರೆಗೆ ಪರವಾನಿಗೆಯ ಅವಧಿ ಇರಲಿದೆ ಎಂದು ತಿಳಿದು ಬಂದಿದೆ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯನ್ನು ಸೊಸೈಟಿಗಳ ನೋಂದಣಿ ಕಾಯ್ದೆಯಡಿಯಲ್ಲಿ ನೋಂದಾಯಿಸಲಾಗಿದೆ. ಇದು ರಾಜಕಿಯೇತರ ಮತ್ತು ಜಾತ್ಯಾತೀತ ಸಂಸ್ಥೆಯಾಗಿದೆ. ಶಿಕ್ಷಣ ಮತ್ತು ಸಾಮಾಜಿಕ ವಿಭಾಗದ ಅಡಿಯಲ್ಲಿ ಸಂಸ್ಥೆಗೆ ಪರವಾನಗಿಯನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.
ಗೃಹ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು 16,047 ಎನ್ ಜಿಒಗಳಿಗೆ ಎಫ್ ಸಿಆರ್ ಎ ಪರವಾನಗಿ ನೀಡಲಾಗಿದೆ. ಅವುಗಳಲ್ಲಿ 2024ರಲ್ಲಿ 368 ಟ್ರಸ್ಟ್ ಗಳಿಗೆ ಎಫ್ ಸಿಆರ್ ಎ ಪರವಾನಗಿ ನೀಡಲಾಗಿದೆ. ಇದಲ್ಲದೆ, ಇಲ್ಲಿಯವರೆಗೆ 20,000ಕ್ಕೂ ಅಧಿಕ FCRA ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ.