ಆಂಧ್ರಪ್ರದೇಶ | ಮನೆ ಬಾಗಿಲಿಗೆ ʼಪಾರ್ಸೆಲ್ʼ ಬಂದ ಅಪರಿಚಿತ ಮೃತದೇಹದ ಗುರುತು ಪತ್ತೆ!
ಗೋದಾವರಿ: ಡಿಸೆಂಬರ್ 19ರಂದು ಆಂಧ್ರಪ್ರದೇಶದ ಮಹಿಳೆಯೊಬ್ಬರು ಪಾರ್ಸೆಲ್ ಮೂಲಕ ಸ್ವೀಕರಿಸಿದ್ದ ಕೊಳೆತ ಮೃತದೇಹದ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದು, ಮೃತ ವ್ಯಕ್ತಿಯನ್ನು ದಿನಗೂಲಿ ಕೆಲಸ ಮಾಡುತ್ತಿದ್ದ ಕಲ್ಲ ಮಂಡಲ್ ನ ಗಾಂಧಿನಗರ ನಿವಾಸಿ ಬಿ.ಪಾರ್ಲಯ್ಯ ಎಂದು ಹೇಳಲಾಗಿದೆ.
ಸಗಿ ತುಳಸಿ ಎಂಬ ಪಶ್ಚಿಮ ಗೋದಾವರಿಯ ಮಹಿಳೆಯು ತನ್ನ ನಿರ್ಮಾಣ ಹಂತದಲ್ಲಿರುವ ಮನೆಗಾಗಿ ಕ್ಷತ್ರಿಯ ಸೇವಾ ಸಮಿತಿಯಿಂದ ಸಾಮಗ್ರಿಗಳಿಗಾಗಿ ಕಾಯುತ್ತಿದ್ದರು. ಆದರೆ, ಡಿಸೆಂಬರ್ 19ರಂದು ತಮ್ಮ ಮನೆಯ ಬಾಗಿಲಿಗೆ ಬಂದಿದ್ದ ಪಾರ್ಸೆಲ್ ನಲ್ಲಿ ಕೊಳೆತ ಮೃತದೇಹವಿರುವುದನ್ನು ಕಂಡು ಆಘಾತಗೊಂಡಿದ್ದರು. ಅಲ್ಲದೆ, ಆ ಪಾರ್ಸೆಲ್ ನಲ್ಲಿ ಒಂದು ಕೋಟಿ ರೂಪಾಯಿ ಮೊತ್ತಕ್ಕಾಗಿ ಬೇಡಿಕೆಯಿಟ್ಟಿದ್ದ ಪತ್ರವೂ ಪತ್ತೆಯಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಪಶ್ಚಿಮ ಗೋದಾವರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅದ್ನಾನ್ ನಯೀಂ ಅಸೀಂ, “ಆತ (ಪಾರ್ಲಯ್ಯ) ಮದ್ಯವ್ಯಸನಿಯಾಗಿದ್ದ ಹಾಗೂ ತನ್ನ ಪತ್ನಿಯೊಂದಿಗೆ ನಿತ್ಯ ಜಗಳವಾಡುತ್ತಿದ್ದ. ಅವರಿಬ್ಬರೂ ಕಳೆದ 15 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಪಾರ್ಲಯ್ಯ ನಿರ್ಗತಿಕನಂತೆ ರಸ್ತೆ ಬದಿ ಹಾಗೂ ದೇವಸ್ಥಾನಗಳ ಬಳಿ ವಾಸಿಸುತ್ತಿದ್ದ” ಎಂದ ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮೃತ ವ್ಯಕ್ತಿಯ ಗುರುತನ್ನು ನಿಖರವಾಗಿ ದೃಢಪಡಿಸಿಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿರುವಾಗಲೇ, ಮೃತದೇಹದ ಮೇಲೆ ಕಂಡು ಬಂದಿರುವ ಬಟ್ಟೆಗಳ ಆಧರಿಸಿ ಆತನ ನೆರೆಹೊರೆಯವರು ಹಾಗೂ ಸಂಬಂಧಿಕರು, ಅದು ಪಾರ್ಲಯ್ಯನ ಮೃತದೇಹ ಎಂದು ಗುರುತಿಸಿದ್ದಾರೆ.
ಶ್ರೀಧರ್ ವರ್ಮ ಎಂಬವರು ತಮ್ಮ ಹೊಲದಲ್ಲಿನ ಕಸಕಡ್ಡಿ ಹಾಗೂ ಕಳೆಯನ್ನು ಸ್ವಚ್ಛಗೊಳಿಸಲು ಪಾರ್ಲಯ್ಯನನ್ನು ಕೆಲಸಕ್ಕಿಟ್ಟುಕೊಂಡಿದ್ದರು. ವರ್ಮರ ಹೊಲದಲ್ಲಿ ಡಿಸೆಂಬರ್ 17ರಂದು ಕೆಲಸ ಮಾಡಿದ್ದ ಪಾರ್ಲಯ್ಯ, ಅವರೊಂದಿಗೆ ಬೈಕ್ ನಲ್ಲಿ ಕಡೆಯದಾಗಿ ಕಾಣಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 19ರಂದು ಪಾರ್ಲಯ್ಯರ ಮೃತದೇಹವನ್ನು ತುಳಸಿ ಸ್ವೀಕರಿಸಿದಾಗಿನಿಂದ ಶ್ರೀಧರ್ ವರ್ಮ ತಲೆ ಮರೆಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ನಡುವೆ, ತುಳಸಿ ನಿವಾಸಕ್ಕೆ ಪಾರ್ಸೆಲ್ ಅನ್ನು ಸರಬರಾಜು ಮಾಡುವಂತೆ ಆಟೊರಿಕ್ಷಾ ಚಾಲಕನಿಗೆ ನೀಡಿದ್ದ ವ್ಯಕ್ತಿಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಆಕೆಯನ್ನು ಲಕ್ಷ್ಮಿ ಎಂದು ಗುರುತಿಸಲಾಗಿದೆ. ಸದರಿ ಮಹಿಳೆಯ ಕುಟುಂಬದ ಸದಸ್ಯರು ತನಿಖೆಗೆ ಸಹಕರಿಸುತ್ತಿಲ್ಲವಾದ್ದರಿಂದ, ಪೊಲೀಸರ ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಲಾಗಿದೆ.