ಒಂದೂವರೆ ವರ್ಷದಲ್ಲಿ ಸುಮಾರು 10 ಲಕ್ಷ ಕಾಯಂ ಸರಕಾರಿ ಉದ್ಯೋಗಗಳನ್ನು ಒದಗಿಸಲಾಗಿದೆ: ಪ್ರಧಾನಿ ಮೋದಿ
ಹೊಸದಿಲ್ಲಿ: ಕಳೆದ ಒಂದು ಅಥವಾ ಒಂದೂವರೆ ವರ್ಷದಲ್ಲಿ ತನ್ನ ಸರಕಾರವು ಯುವಜನತೆಗೆ ಸುಮಾರು 10 ಲಕ್ಷ ಕಾಯಂ ಸರಕಾರಿ ಉದ್ಯೋಗಗಳನ್ನು ಒದಗಿಸಿದ್ದು, ಇದೊಂದು ದಾಖಲೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಇಲ್ಲಿ ಹೇಳಿದರು.
ರೋಜಗಾರ್ ಮೇಳದಲ್ಲಿ ನೇಮಕಾತಿಗೊಂಡವರನ್ನು ವರ್ಚುವಲ್ ಮೂಲಕ ಉದ್ದೇಶಿಸಿ ಮಾತನಾಡಿದ ಮೋದಿ, ಹಿಂದಿನ ಯಾವುದೇ ಸರಕಾರದ ಅವಧಿಯಲ್ಲಿ ಇಷ್ಟೊಂದು ದಾಖಲೆ ಪ್ರಮಾಣದಲ್ಲಿ ಉದ್ಯೋಗಗಳನ್ನು ಒದಗಿಸಿರಲಿಲ್ಲ ಎಂದು ಹೇಳಿದರು. ಈ ರೋಜಗಾರ್ ಮೇಳದಲ್ಲಿ 71,000ಕ್ಕೂ ಅಧಿಕ ಜನರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.
ಕೇಂದ್ರ ಸರಕಾರದ ನೀತಿಗಳು ಮತ್ತು ಕಾರ್ಯಕ್ರಮಗಳಲ್ಲಿ ಯುವಜನತೆಗೆ ಆದ್ಯತೆ ನೀಡಲಾಗಿದೆ ಎಂದ ಅವರು, ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಾಗಿದೆ ಎಂದು ತಿಳಿಸಿದರು.
ರೋಜಗಾರ್ ಮೇಳಗಳು ಯುವಜನರ ಸಬಲೀಕರಣದ ಜೊತೆಗೆ ಅವರ ಸಾಮರ್ಥ್ಯಗಳನ್ನು ಅನಾವರಣಗೊಳಿಸುತ್ತಿವೆ. ಭಾರತದ ಇಂದಿನ ಯುವಜನತೆ ಹೊಸ ಆತ್ಮವಿಶ್ವಾಸವನ್ನು ಹೊಂದಿದ್ದು,ಪ್ರತಿಯೊಂದು ಕ್ಷೇತ್ರದಲ್ಲಿಯೂ ಯಶಸ್ವಿಯಾಗುತ್ತಿದ್ದಾರೆ ಎಂದರು.
ನೇಮಕಾತಿಗೊಂಡವರಲ್ಲಿ ಮಹಿಳೆಯರ ಹೆಚ್ಚಿನ ಸಂಖ್ಯೆಯನ್ನು ಬೆಟ್ಟು ಮಾಡಿದ ಅವರು, ಮಹಿಳೆಯರನ್ನು ಪ್ರತಿಯೊಂದೂ ಕ್ಷೇತ್ರದಲ್ಲಿ ಸ್ವಾವಲಂಬಿಗಳನ್ನಾಗಿಸುವುದು ಸರಕಾರದ ಪ್ರಯತ್ನವಾಗಿದೆ ಎಂದರು.
ಮಹಿಳೆಯರಿಗೆ 26 ವಾರಗಳ ಹೆರಿಗೆ ರಜೆಯನ್ನು ಮಂಜೂರು ಮಾಡುವ ಸರಕಾರದ ನಿರ್ಧಾರವು ಅವರ ವೃತ್ತಿಜೀವನದಲ್ಲಿ ತುಂಬ ನೆರವಾಗಿದೆ ಎಂದ ಮೋದಿ, ಪಿಎಂ ಆವಾಸ್ ಯೋಜನೆಯಡಿ ನಿರ್ಮಿಸಲಾಗಿರುವ ಮನೆಗಳ ಬಹುತೇಕ ಮಾಲಿಕರು ಮಹಿಳೆಯರೇ ಆಗಿದ್ದಾರೆ ಎಂದು ಒತ್ತಿ ಹೇಳಿದರು. ಮಹಿಳಾ ನೇತೃತ್ವದ ಅಭಿವೃದ್ಧಿಯು ದೇಶದಲ್ಲಿ ವೇಗ ಪಡೆದುಕೊಳ್ಳುತ್ತಿದೆ ಎಂದರು.
ಭಾರತಿಯ ಯುವಜನತೆಯ ಸಾಮರ್ಥ್ಯಗಳು ಮತ್ತು ಪ್ರತಿಭೆಯನ್ನು ಗರಿಷ್ಠವಾಗಿ ಬಳಸಿಕೊಳ್ಳುವುದು ತನ್ನ ಸರಕಾರದ ಆದ್ಯತೆಯಾಗಿದೆ. ಸ್ಟಾರ್ಟ್-ಅಪ್ ಇಂಡಿಯಾ,ಡಿಜಿಟಲ್ ಇಂಡಿಯಾ,ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಸುಧಾರಣೆಯಂತಹ ಹಲವಾರು ಕಾರ್ಯಕ್ರಮಗಳಲ್ಲಿ ಯುವಜನತೆ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಎಂದು ಮೋದಿ ಹೇಳಿದರು.