ಜೈಪುರ | ʼಮೂರು ವಿವಾಹ, 1.25 ಕೋಟಿ ರೂ. ವಸೂಲಿʼ: ʼಲೂಟಿಕೋರ ವಧುʼವಿನ ಬಂಧನ

Update: 2024-12-23 15:30 GMT

 ಸೀಮಾ | PC : NDTV 

ಜೈಪುರ: ಮದುವೆಯನ್ನೇ ಕಸುಬನ್ನಾಗಿಸಿಕೊಂಡು 1.25 ಕೋಟಿ ರೂ. ವಸೂಲಿ ಮಾಡಿದ ಮಹಿಳೆಯನ್ನು ಕೊನೆಗೂ ಜೈಪುರ ಪೊಲೀಸರು ಬಂಧಿಸಿದ್ದಾರೆ.

ಉತ್ತರಾಖಂಡ ನಿವಾಸಿಯಾಗಿರುವ ಸೀಮಾ ಅಲಿಯಾಸ್ ನಿಕ್ಕಿ ಬಂಧಿತ ಮಹಿಳೆ. ಈಕೆಗೆ ಮೂರು ಮದುವೆಯಾಗಿದ್ದು, 1.25 ಕೋಟಿ ರೂ. ಹಣ ಸಂಪಾದಿಸಿದ್ದಾಳೆ.

ಸೀಮಾ ಅಲಿಯಾಸ್ ನಿಕ್ಕಿ 2013ರಲ್ಲಿ ಆಗ್ರಾದ ಉದ್ಯಮಿಯೊಬ್ಬರನ್ನು ವಿವಾಹವಾಗಿದ್ದಳು. ಇದು ಆಕೆಯ ಮೊದಲ ವಿವಾಹವಾಗಿತ್ತು. ಇದಾದ ಕೆಲ ಸಮಯದ ಬಳಿಕ ಪತಿಯ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿ ರಾಜಿ ಸಂಧಾನದ ಭಾಗವಾಗಿ 75 ಲಕ್ಷ ರೂ.ವನ್ನು ಪರಿಹಾರವಾಗಿ ನಿಕ್ಕಿ ಪಡೆದುಕೊಂಡಿದ್ದಳು.

2017ರಲ್ಲಿ ಸೀಮಾ ಅಲಿಯಾಸ್ ನಿಕ್ಕಿ ಗುರುಗ್ರಾಮ್ ನಿವಾಸಿ ಸಾಫ್ಟ್ವೇರ್ ಇಂಜಿನಿಯರ್ ನ್ನು ವಿವಾಹವಾಗಿದ್ದಾಳೆ. ಇದು ಆಕೆಯ ಎರಡನೇ ವಿವಾಹವಾಗಿದೆ. ಆತನ ಜೊತೆ ಕೆಲ ಕಾಲ ಜೀವನ ನಡೆಸಿ 10 ಲಕ್ಷ ರೂ. ಪರಿಹಾರದ ಮೊತ್ತ ಪಡೆದು ದೂರವಾಗಿದ್ದಾಳೆ.

ನಂತರ 2023ರಲ್ಲಿ ಸೀಮಾ ಜೈಪುರ ಮೂಲದ ಉದ್ಯಮಿಯನ್ನು ವಿವಾಹವಾಗಿದ್ದಾಳೆ. ಆದರೆ ವಿವಾಹವಾದ ಕೆಲವೇ ದಿನಗಳಲ್ಲಿ 36 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣದೊಂದಿಗೆ ಮನೆಯಿಂದ ಪರಾರಿಯಾಗಿದ್ದಾಳೆ. ಈ ಕುರಿತು ಪ್ರಕರಣ ದಾಖಲಿಸಿದ ಬಳಿಕ ಜೈಪುರ ಪೊಲೀಸರು ಸೀಮಾಳನ್ನು ಬಂಧಿಸಿದ್ದಾರೆ.

ಸೀಮಾ ವಿವಾಹ ವೇದಿಕೆ ಮ್ಯಾಟ್ರಿಮನಿ ಮೂಲಕ ಬೇರೆ ಬೇರೆ ರಾಜ್ಯಗಳಲ್ಲಿ ತನ್ನ ವಂಚನಾ ಜಾಲಕ್ಕೆ ಉದ್ಯಮಿಗಳನ್ನು ಮತ್ತು ಸಾಫ್ಟ್‌ ವೇರ್ ಇಂಜಿನಿಯರ್ ಗಳನ್ನು ಹುಡುಕುತ್ತಿದ್ದಳು. ಸಾಮಾನ್ಯವಾಗಿ ವಿಚ್ಛೇದನ ಪಡೆದ ಅಥವಾ ಪತ್ನಿ ಮೃತಪಟ್ಟ ಪುರುಷರನ್ನೇ ಗುರಿಯಾಗಿಸಿ ವಂಚನೆಯ ಬಲೆಗೆ ಬೀಸುತ್ತಿದ್ದಳು ಎನ್ನುವುದು ತನಿಖೆಯಿಂದ ಬಯಲಾಗಿದೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News