ಸರ್ಕಾರಿ ಆಯೋಗದಲ್ಲಿ ಉನ್ನತ ಹುದ್ದೆ ನೀಡುವುದಾಗಿ ನಂಬಿಸಿ ನಟಿ ದಿಶಾ ಪಟಾನಿ ತಂದೆಗೆ 25 ಲಕ್ಷ ರೂ. ವಂಚನೆ

Update: 2024-11-16 06:33 GMT

ತಂದೆ ಜಗದೀಶ್ ಸಿಂಗ್ ಜೊತೆ ನಟಿ ದಿಶಾ ಪಟಾನಿ (Photo credit: indiatoday.in)

ಬರೇಲಿ (ಉತ್ತರ ಪ್ರದೇಶ): ನಿವೃತ್ತ ಡಿವೈಎಸ್ಪಿ ಹಾಗೂ ನಟಿ ದಿಶಾ ಪಟಾನಿ ಅವರ ತಂದೆ ಜಗದೀಶ್ ಸಿಂಗ್ ಪಟಾನಿ ಅವರಿಗೆ ಸರ್ಕಾರಿ ಆಯೋಗದಲ್ಲಿ ಉನ್ನತ ಸ್ಥಾನ ನೀಡುವುದಾಗಿ ಭರವಸೆ ನೀಡಿದ ಐವರು 25 ಲಕ್ಷ ರೂಪಾಯಿಗಳನ್ನು ವಂಚಿಸಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಸಂಜೆ ಬರೇಲಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎಫ್‌ಐಆರ್ ದಾಖಲಾಗಿದೆ.

ಶಿವೇಂದ್ರ ಪ್ರತಾಪ್ ಸಿಂಗ್, ದಿವಾಕರ್ ಗಾರ್ಗ್, ಜುನಾ ಅಖಾರಾದ ಆಚಾರ್ಯ ಜಯಪ್ರಕಾಶ್, ಪ್ರೀತಿ ಗಾರ್ಗ್ ಮತ್ತು ಒಬ್ಬ ಅಪರಿಚಿತ ವ್ಯಕ್ತಿಯ ವಿರುದ್ಧ ವಂಚನೆ, ಕ್ರಿಮಿನಲ್ ಬೆದರಿಕೆ ಮತ್ತು ಸುಲಿಗೆ ಪ್ರಕರಣ ದಾಖಲಿಸಲಾಗಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆ ಪ್ರಭಾರಿ ಡಿ ಕೆ ಶರ್ಮಾ ತಿಳಿಸಿದ್ದಾರೆ.

ಬರೇಲಿಯ ಸಿವಿಲ್ ಲೈನ್ಸ್ ಪ್ರದೇಶದ ನಿವಾಸಿಯಾಗಿರುವ ಜಗದೀಶ್ ಪಟಾನಿ ಅವರಿಗೆ ವೈಯಕ್ತಿಕವಾಗಿ ಪರಿಚಯವಿರುವ ಶಿವೇಂದ್ರ ಪ್ರತಾಪ್ ಸಿಂಗ್ ಎಂಬವರು ದಿವಾಕರ್ ಗರ್ಗ್ ಮತ್ತು ಆಚಾರ್ಯ ಜಯಪ್ರಕಾಶ್ ಅವರನ್ನು ಪರಿಚಯಿಸಿದ್ದಾಗಿ ದೂರಿನಲ್ಲಿ ಹೇಳಲಾಗಿದೆ.

ಆರೋಪಿಗಳು ಬಲವಾದ ರಾಜಕೀಯ ಸಂಪರ್ಕಗಳನ್ನು ಹೊಂದಿದ್ದಾರೆ ಎಂದು ಪರಿಚಯಿಸಿಕೊಂಡು ಪಟಾನಿ ಅವರಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಅಥವಾ ಸರ್ಕಾರಿ ಆಯೋಗದಲ್ಲಿ ಪ್ರತಿಷ್ಠಿತ ಹುದ್ದೆಯನ್ನು ಕೊಡಿಸುವ ಭರವಸೆ ನೀಡಿದ್ದರು ಎನ್ನಲಾಗಿದೆ.

ಪಟಾನಿ ಅವರ ನಂಬಿಕೆಯನ್ನು ಗಳಿಸಿದ ನಂತರ, ವಂಚಕರು 25 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ. 5 ಲಕ್ಷ ರೂಪಾಯಿ ನಗದು ಮತ್ತು 20 ಲಕ್ಷ ರೂಪಾಯಿಗಳನ್ನು ಮೂರು ವಿಭಿನ್ನ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡುವ ಮೂಲಕ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಹಣ ಪಡೆದು ಮೂರು ತಿಂಗಳಾದರೂ ನೀಡಿದ್ದ ಭರವಸೆಯಲ್ಲಿ ಯಾವುದೇ ಪ್ರಗತಿ ಕಾಣದಿದ್ದಾಗ ಆರೋಪಿಗಳು ಬಡ್ಡಿ ಸಮೇತ ಹಣವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪಟಾನಿ ತನ್ನ ಹಣವನ್ನು ಹಿಂತಿರುಗಿಸಲು ಒತ್ತಾಯಿಸಿದಾಗ, ಆರೋಪಿಗಳು ಬೆದರಿಕೆಗಳನ್ನು ಹಾಕಲು ಪ್ರಾರಂಭಿಸಿದರು. ಆಕ್ರಮಣಕಾರಿಯಾಗಿ ವರ್ತಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ತಮ್ಮ ರಾಜಕೀಯ ಸಂಪರ್ಕಗಳನ್ನು ತೋರಿಸಲು ಹಿಮಾಂಶು ಎಂಬಾತನನ್ನು ವಿಶೇಷ ಕರ್ತವ್ಯದ ಅಧಿಕಾರಿ ಎಂದು, ತಮ್ಮದೇ ಸಹಚರರನ್ನು ಪರಿಚಯಿಸುವ ಮೂಲಕ ವಂಚಕರು ತನ್ನನ್ನು ದಾರಿ ತಪ್ಪಿಸಿದ್ದಾರೆ ಎಂದು ಪಟಾನಿ ಆರೋಪಿಸಿದ್ದಾರೆ.

ದೊಡ್ಡ ವಂಚನೆ ನಡೆದಿರುವ ಶಂಕೆ ವ್ಯಕ್ತಪಡಿಸಿ ಅವರು ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್‌ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News