ಮಹಾರಾಷ್ಟ್ರ | ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ 6,382 ದೂರು ದಾಖಲು; 536 ಕೋಟಿ ರೂ. ನಗದು, ವಸ್ತು ವಶ
ಮುಂಬೈ: ಕಳೆದ ತಿಂಗಳಿನಿಂದ ಮಹಾರಾಷ್ಟ್ರದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿ 6,382 ದೂರುಗಳನ್ನು ಸ್ವೀಕರಿಸಲಾಗಿದೆ. 536 ಕೋಟಿ ರೂ.ಗೂ ಅಧಿಕ ಮೌಲ್ಯದ ನಗದು ಹಾಗೂ ವಸ್ತುಗಳನ್ನು ತನಿಖಾ ಸಂಸ್ಥೆಗಳು ವಶಪಡಿಸಿಕೊಂಡಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಈ ದೂರುಗಳ ಕುರಿತಂತೆ ರಾಜಕೀಯ ಪಕ್ಷಗಳು, ಮುಖಂಡರು ಹಾಗೂ ಕಾರ್ಯಕರ್ತರಿಗೆ ನೋಟಿಸು ನೀಡಲಾಗಿತ್ತು. ಒಂದು ದೂರನ್ನು ಹೊರತುಪಡಿಸಿ ಉಳಿದೆಲ್ಲ ದೂರುಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಅದು ತಿಳಿಸಿದೆ.
ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ ಬಳಿಕ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ಅಕ್ಟೋಬರ್ 15ರಿಂದ ನವೆಂಬರ್ 14ರ ವರೆಗೆ ಚುನಾವಣಾ ಆಯೋಗದ ಸಿವಿಜಿಲ್ ಆ್ಯಪ್ ಮೂಲಕ ಈ ದೂರುಗಳನ್ನು ಸ್ವೀಕರಿಸಿದೆ ಎಂದು ಅದು ಹೇಳಿದೆ.
ಅಕ್ಟೋಬರ್ 15ರಿಂದ ಇಲ್ಲಿವರೆಗೆ ವಿವಿಧ ರಾಜ್ಯ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳು ಅಕ್ರಮ ನಗದು, ಮಧ್ಯ, ಮಾದಕ ದ್ರವ್ಯ ಹಾಗೂ ಅಮೂಲ್ಯ ಲೋಹಗಳು ಸೇರಿದಂತೆ 536.45 ಕೋಟಿ ರೂ. ಸೊತ್ತುಗಳನ್ನು ವಶಪಡಿಸಿಕೊಂಡಿದೆ ಎಂದು ಅದು ತಿಳಿಸಿದೆ.
ಮಹಾರಾಷ್ಟ್ರದಲ್ಲಿ ನ. 20ರಂದು ಮತದಾನ ನಡೆಯಲಿದೆ. ನ. 23ರಂದು ಫಲಿತಾಂಶ ಪ್ರಕಟವಾಗಲಿದೆ.