ತಾಯಿಯನ್ನು ಮನೆಯಲ್ಲಿ ಕೂಡಿ ಹಾಕಿ ಪತ್ನಿ ಜೊತೆ ಹೋದ ಪುತ್ರ: ಹಸಿವು, ಬಾಯಾರಿಕೆಯಿಂದ ಬಳಲಿ ವೃದ್ಧ ಮಹಿಳೆ ಮೃತ್ಯು
ಭೋಪಾಲ್: ಪುತ್ರನೊಬ್ಬ ಹಾಸಿಗೆ ಹಿಡಿದಿದ್ದ ತನ್ನ ತಾಯಿಯನ್ನು ಕೋಣೆಯಲ್ಲಿ ಕೂಡಿ ಹಾಕಿ, ತನ್ನ ಕುಟುಂಬದ ಸದಸ್ಯರೊಂದಿಗೆ ನಗರದಿಂದ ಹೊರಗೆ ಹೋಗಿದ್ದರಿಂದ, ಹಸಿವು ಹಾಗೂ ಬಾಯಾರಿಕೆಯಿಂದ 80 ವರ್ಷದ ವೃದ್ಧ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಈ ಘಟನೆ ಭೋಪಾಲ್ ನಗರದಲ್ಲಿನ ನಿಶತ್ ಪುರ ಪ್ರದೇಶದಲ್ಲಿ ನಡೆದಿದ್ದು, ಮೃತ ಮಹಿಳೆ ಲಲಿತ್ ದುಬೆ ಎಂಬುವವರು ತಮ್ಮ ಪುತ್ರ ಅರುಣ್ ನೊಂದಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ.
ತನ್ನ ತಾಯಿ ಲಲಿತ್ ದುಬೆ ಅವರನ್ನು ಮನೆಯಲ್ಲಿ ಕೂಡಿ ಹಾಕಿದ ನಂತರ, ಅವರ ಪುತ್ರ ಅರುಣ್ ತನ್ನ ಪತ್ನಿ ಹಾಗೂ ಪುತ್ರನೊಂದಿಗೆ ಉಜ್ಜಯಿನಿಗೆ ತೆರಳಿದ್ದಾರೆ. ನಂತರ, ಇಂದೋರ್ ನಲ್ಲಿ ವಾಸಿಸುತ್ತಿರುವ ತನ್ನ ಸಹೋದರ ಅಜಯ್ ಗೆ ಕರೆ ಮಾಡಿರುವ ಅರುಣ್, ನಾನು ನನ್ನ ಕುಟುಂಬದೊಂದಿಗೆ ಉಜ್ಜಯಿನಿಗೆ ತೆರಳಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
ತನ್ನ ತಾಯಿ ಲಲಿತ್ ದುಬೆಯ ಪರಿಸ್ಥಿತಿ ಅರ್ಥವಾದ ನಂತರ, ಭೋಪಾಲ್ ನಲ್ಲಿರುವ ತನ್ನ ಸ್ನೇಹಿತರೊಬ್ಬರಿಗೆ ಕರೆ ಮಾಡಿರುವ ಅಜಯ್, ಆಕೆಯ ಕುರಿತು ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ಅಜಯ್ ಸ್ನೇಹಿತರು ಮನೆಯನ್ನು ತಲುಪಿದಾಗ, ವೃದ್ಧ ಮಹಿಳೆ ಮೃತಪಟ್ಟಿರುವುದು ಕಂಡು ಬಂದಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ಧಾವಿಸಿರುವ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಗಂಭೀರ ಹಸಿವು ಹಾಗೂ ನಿರ್ಜಲೀಕರಣದಿಂದ ಸಾವು ಸಂಭವಿಸಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.
ಅಜಯ್ ನೀಡಿದ ದೂರನ್ನು ಆಧರಿಸಿ, ಆರೋಪಿ ಅರುಣ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105ರ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಭೋಪಾಲ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರೂಪೇಶ್ ದುಬೆ “ಲಲಿತ್ ದುಬೆ ಹಸಿವಿನಿಂದ ಮೃತಪಟ್ಟಿದ್ದಾರೆ ಎಂಬ ಸಂಗತಿ ಮರಣೊತ್ತರ ಪರೀಕ್ಷಾ ವರದಿಯಲ್ಲಿ ಬಹಿರಂಗವಾಗಿದೆ. ಆಕೆ ಅಸ್ವಸ್ಥಗೊಂಡಿದ್ದುದರಿಂದ, ಆಕೆ ಹಾಸಿಗೆಯಿಂದ ಮೇಲೇಳಲು ಸಾಧ್ಯವಾಗಿಲ್ಲ, ಆಹಾರ ಅಥವಾ ಔಷಧವನ್ನು ಸೇವಿಸಲಾಗಲಿ ಆಗಿಲ್ಲ ಹಾಗೂ 24 ಗಂಟೆಗಳ ಕಾಲ ನೀರು ಸೇವಿಸದೆ ಇರುವುದರಿಂದ ಸಾವು ಸಂಭವಿಸಿದೆ. ಇದರ ಬೆನ್ನಿಗೇ, ಆರೋಪಿ ಪುತ್ರ ಅರುಣ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.