ಕಾಲ್ತುಳಿತ ಪ್ರಕರಣ | ಪೊಲೀಸರೆದುರು ವಿಚಾರಣೆಗೆ ಹಾಜರಾದ ನಟ ಅಲ್ಲು ಅರ್ಜುನ್
ಹೈದರಾಬಾದ್: ಡಿಸೆಂಬರ್ 4ರಂದು ಇಲ್ಲಿನ ಸಂಧ್ಯಾ ಚಿತ್ರಮಂದಿರದಲ್ಲಿ ಆಯೋಜಿಸಲಾಗಿದ್ದ ‘ಪುಷ್ಪ-2’ ಪ್ರದರ್ಶನದ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ತೆಲುಗು ನಟ ಅಲ್ಲು ಅರ್ಜುನ್ ಇಂದು ಚಿಕ್ಕಡಪಲ್ಲಿ ಪೊಲೀಸರೆದುರು ವಿಚಾರಣೆಗೆ ಹಾಜರಾದರು.
ಇಂದು ಬೆಳಗ್ಗೆ 11 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ನೋಟಿಸ್ ನೀಡಲಾಗಿತ್ತು. ಅವರ ನಿವಾಸದ ಬಳಿ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು.
ಇದಕ್ಕೂ ಮುನ್ನ, ನಾನು ತನಿಖೆಗೆ ಸಹಕರಿಸುವುದಾಗಿ ನಟ ಅಲ್ಲು ಅರ್ಜುನ್ ಭರವಸೆ ನೀಡಿದ್ದರು.
ಕಾಲ್ತುಳಿತ ಘಟನೆಗೆ ಸಂಬಂಧಿಸಿದ ವಿಡಿಯೊ ದೃಶ್ಯಾವಳಿಗಳನ್ನು ಹೈದರಾಬಾದ್ ಪೊಲೀಸ್ ಆಯುಕ್ತ ಸಿ.ವಿ.ಆನಂದ್ ಬಿಡುಗಡೆಗೊಳಿಸಿದ ನಂತರ, ಈ ನೋಟಿಸ್ ಜಾರಿಗೊಳಿಸಲಾಗಿದೆ.
ಡಿಸೆಂಬರ್ 4ರಂದು ಹೈದರಾಬಾದ್ ನ ಸಂಧ್ಯಾಕ ಚಿತ್ರಮಂದಿರದ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟು, ಗಾಯಗೊಂಡಿದ್ದ ಆಕೆಯ ಎಂಟು ವರ್ಷದ ಪುತ್ರನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಘಟನೆಯ ನಂತರ ಮೃತ ಮಹಿಳೆಯ ಕುಟುಂಬದ ಸದಸ್ಯರು ನೀಡಿದ ದೂರನ್ನು ಆಧರಿಸಿ, ನಟ ಅಲ್ಲು ಅರ್ಜುನ್, ಅವರ ಭದ್ರತಾ ತಂಡ ಹಾಗೂ ಚಿತ್ರಮಂದಿರದ ವ್ಯವಸ್ಥಾಪಕ ಮಂಡಳಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಹೈದರಾಬಾದ್ ನಗರ ಪೊಲೀಸರು ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ಕಾಲ್ತುಳಿತ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಅವರನ್ನು 11ನೇ ಆರೋಪಿಯನ್ನಾಗಿಸಲಾಗಿದ್ದು, ಹೈದರಾಬಾದ್ ನಗರ ಪೊಲೀಸರು ಅವರನ್ನು ಡಿಸೆಂಬರ್ 13ರಂದು ಬಂಧಿಸಿದ್ದರು. ಅದೇ ದಿನ ತೆಲಂಗಾಣ ಹೈಕೋರ್ಟ್ ಅವರಿಗೆ ನಾಲ್ಕು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ನಂತರ, ಡಿಸೆಂಬರ್ 14ರ ಬೆಳಗ್ಗೆ ಅವರು ಜೈಲಿನಿಂದ ಬಿಡುಗಡೆಗೊಂಡಿದ್ದರು.