ಸಂಸತ್ತಿನಲ್ಲಿ ಫೆಲೆಸ್ತೀನ್ ಪರ ಘೋಷಣೆ : ಅಸಾದುದ್ದೀನ್ ಉವೈಸಿಗೆ ಬರೇಲಿ ನ್ಯಾಯಾಲಯದಿಂದ ಸಮನ್ಸ್
ಬರೇಲಿ: ಸಂಸತ್ತಿನಲ್ಲಿ ಪ್ರಮಾಣವಚನ ಸ್ವೀಕಾರದ ವೇಳೆ ಫೆಲೆಸ್ತೀನ್ ಪರ ಘೋಷಣೆ ಕೂಗಿ ಸಂವಿಧಾನವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯ ಹಿನ್ನೆಲೆ ಉತ್ತರಪ್ರದೇಶದ ಬರೇಲಿಯ ನ್ಯಾಯಾಲಯವು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಉವೈಸಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.
ಉವೈಸಿ ಅವರು ಜೂನ್ 25ರಂದು 18ನೇ ಲೋಕಸಭೆಯ ಹೈದರಾಬಾದ್ ನ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅವರು ತನ್ನ ಪ್ರಮಾಣ ವಚನ ಸ್ವೀಕಾರವನ್ನು ‘‘ಜೈ ಫೆಲೆಸ್ತೀನ್’’ ಎಂಬ ಘೋಷಣೆಯೊಂದಿಗೆ ಅಂತ್ಯಗೊಳಿಸಿದ್ದರು.
ವಕೀಲ ವಿರೇಂದ್ರ ಗುಪ್ತಾ ಅವರು ಸಲ್ಲಿಸಿದ ಅರ್ಜಿ ಹಿನ್ನೆಲೆ 2025ರ ಜನವರಿ 7ರಂದು ವಿಚಾರಣೆಗೆ ಹಾಜರಾಗುವಂತೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಉವೈಸಿಗೆ ನ್ಯಾಯಾಲಯ ಹೇಳಿದೆ.
ಸಂಸತ್ತಿನ ಕೆಳಮನೆಯಲ್ಲಿ ಜೂನ್ ನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭ ಫೆಲೆಸ್ತೀನ್ ಪರ ಘೋಷಣೆ ಕೂಗುವ ಮೂಲಕ ಸಂವಿಧಾನ ಹಾಗೂ ಕಾನೂನು ನಂಬಿಕೆಗಳನ್ನು ಉವೈಸಿ ಉಲ್ಲಂಘಿಸಿದ್ದಾರೆ ಎಂದು ವಕೀಲ ವಿರೇಂದ್ರ ಗುಪ್ತಾ ತನ್ನ ಅರ್ಜಿಯಲ್ಲಿ ಆರೋಪಿಸಿದ್ದಾರೆ.
‘‘ಈ ಬಗ್ಗೆ ನಾನು ಎಂಪಿ/ಎಂಎಲ್ಎ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೆ. ಆದರೆ ನನ್ನ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಅನಂತರ ನಾನು ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದೆ. ಈ ಅರ್ಜಿಯ ಹಿನ್ನೆಲೆಯಲ್ಲಿ ನ್ಯಾಯಾಲಯ ಜನವರಿ 7ರಂದು ತನ್ನ ಮುಂದೆ ಹಾಜರಾಗುವಂತೆ ಉವೈಸಿ ಅವರಿಗೆ ನಿರ್ದೇಶಿಸಿದೆ’’ ಎಂದು ಗುಪ್ತಾ ಸುದ್ದಿಗಾರರಿಗೆ ತಿಳಿಸಿದ್ದಾರೆ.