ಮೊಂಡುತನ ಬಿಡಿ, ರೈತರೊಂದಿಗೆ ಮಾತನಾಡಿ : ಕೇಂದ್ರಕ್ಕೆ ಪಂಜಾಬ್ ಸಿಎಂ ಮಾನ್ ಆಗ್ರಹ
ಚಂಡಿಗಡ : ತನ್ನ ಮೊಂಡುತನವನ್ನು ಬಿಟ್ಟು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗೆ ಕಾನೂನಿನ ಖಾತರಿ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯದ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಮಾತುಕತೆ ನಡೆಸುವಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಮಂಗಳವಾರ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ(ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ನೇತೃತ್ವದಲ್ಲಿ ರೈತರು ಫೆ.13ರಂದು ತಮ್ಮ ದಿಲ್ಲಿ ಜಾಥಾಕ್ಕೆ ಭದ್ರತಾ ಪಡೆಗಳು ತಡೆಯೊಡ್ಡಿದ ಬಳಿಕ ಪಂಜಾಬ್ ಮತ್ತು ಹರ್ಯಾಣ ನಡುವಿನ ಶಂಭು ಮತ್ತು ಖನೌರಿ ಗಡಿ ಕೇಂದ್ರಗಳಲ್ಲಿ ಬೀಡು ಬಿಟ್ಟಿದ್ದಾರೆ.
ರೈತರ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಪಂಜಾಬಿನ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ನ.26ರಿಂದ ಖನೌರಿ ಗಡಿಯಲ್ಲಿ ಉಪವಾಸ ಮುಷ್ಕರವನ್ನು ನಡೆಸುತ್ತಿದ್ದಾರೆ.
ರವಿವಾರ ಅವರ ಉಪವಾಸ 27ನೇ ದಿನವನ್ನು ಪ್ರವೇಶಿಸುತ್ತಿದ್ದಂತೆ ವೈದ್ಯರು ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು.
ಕೇಂದ್ರ ಸರಕಾರವು ತನ್ನ ಮೊಂಡುತನವನ್ನು ಬಿಡಬೇಕು ಮತ್ತು ರೈತ ಸಂಘಟನೆಗಳೊಂದಿಗೆ ಮಾತುಕತೆಗಳನ್ನು ನಡೆಸಬೇಕು ಎಂದು ಎಕ್ಸ್ ಪೋಸ್ಟ್‌ನಲ್ಲಿ ಆಗ್ರಹಿಸಿರುವ ಮಾನ್, ‘ರಶ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ನಿಲ್ಲಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಾಧ್ಯವಾಗುವುದಾದರೆ ದಿಲ್ಲಿಯಿಂದ ಕೇವಲ 200 ಕಿ.ಮೀ.ದೂರದಲ್ಲಿ ಕುಳಿತಿರುವ ರೈತರೊಂದಿಗೆ ಮಾತನಾಡಲು ಅವರಿಗೆ ಸಾಧ್ಯವಿಲ್ಲವೇ? ಅವರು ಯಾವ ಮುಹೂರ್ತಕ್ಕಾಗಿ ಕಾಯುತ್ತಿದ್ದಾರೆ?’ ಎಂದು ಪ್ರಶ್ನಿಸಿದ್ದಾರೆ.
ಪ್ರತಿಭಟನಾನಿರತ ರೈತರೊಂದಿಗೆ ಮಾತುಕತೆ ನಡೆಸುವಂತೆ ಡಿ.19ರಂದೂ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದ ಮಾನ್, ಅದು ಕೇಂದ್ರದ ಕರ್ತವ್ಯವಾಗಿದೆ ಮತ್ತು ಮಾತುಕತೆಗಳ ಮೂಲಕ ಯಾವುದೇ ಖಡ್ಗ ಸಮಸ್ಯೆಯನ್ನು ಬಗೆಹರಿಸಬಹುದು ಎಂದು ಹೇಳಿದ್ದರು.