ಕೇಜ್ರಿವಾಲ್ ಭಾಷಣದ ತಿರುಚಿದ ವೀಡಿಯೊ : ಪಂಜಾಬ್ ಪೋಲಿಸರಿಂದ ಆರು ಎಫ್‌ಐಆರ್

Update: 2024-12-24 15:45 GMT

 ಅರವಿಂದ ಕೇಜ್ರಿವಾಲ್ | PTI

ಹೊಸದಿಲ್ಲಿ : ಸಂವಿಧಾನ ಕುರಿತು ಆಪ್ ವರಿಷ್ಠ ಅರವಿಂದ ಕೇಜ್ರಿವಾಲ್ ಅವರ ಭಾಷಣವನ್ನು ತಿರುಚಿ ಮತ್ತು ಎಡಿಟ್ ಮಾಡಿ ಹರಿಬಿಟ್ಟಿದ್ದ ವೀಡಿಯೊಕ್ಕೆ ಸಂಬಂಧಿಸಿದಂತೆ ಕನಿಷ್ಠ ಆರು ಎಫ್‌ಐಆರ್‌ಗಳನ್ನು ಪಂಜಾಬ್ ಪೋಲಿಸರು ದಾಖಲಿಸಿಕೊಂಡಿದ್ದಾರೆ.

ನಾಲ್ಕು ಪ್ರಕರಣಗಳು ಅಪರಿಚಿತ ವ್ಯಕ್ತಿಗಳ ವಿರುದ್ಧ ದಾಖಲಾಗಿದ್ದರೆ, ದಿಲ್ಲಿಯ ವಕೀಲ ವಿಭೋರ ಆನಂದ್ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

ಕೇಜ್ರಿವಾಲ್ ಭಾಷಣದ ಒಂಭತ್ತು ಸೆಕೆಂಡ್‌ಗಳ ತುಣುಕನ್ನು ಆನಂದ್ ಹಂಚಿಕೊಂಡಿದ್ದು, ‘ಸಂವಿಧಾನವನ್ನು ಬರೆದಿರುವವರು ಆ ವೇಳೆ ಕುಡಿದಿರಬೇಕು ಎಂದು ಯಾರೋ ಹೇಳುತ್ತಿದ್ದರು’ ಎಂದು ಕೇಜ್ರಿವಾಲ್ ಹೇಳಿದ್ದನ್ನು ಅದು ಒಳಗೊಂಡಿದೆ.

ಬಿಜೆಪಿ ಸಂಸದ ಮನೋಜ ತಿವಾರಿ ಅವರೂ ಈ ವೀಡಿಯೊವನ್ನು ಹಂಚಿಕೊಂಡಿದ್ದರು.

ಇದಕ್ಕೆ ಪ್ರತಿಯಾಗಿ ಆಪ್‌ ನ ರಾಜಸ್ಥಾನ ಘಟಕಾಧ್ಯಕ್ಷ ದೇವೇಂದರ್ ಯಾದವ ಅವರು 2012ರಲ್ಲಿ ಕೇಜ್ರಿವಾಲ್ ಮಾಡಿದ್ದ ಭಾಷಣದ 22 ಸೆಕೆಂಡ್‌ಗಳ ತುಣುಕನ್ನು ಹಂಚಿಕೊಂಡಿದ್ದರು.‘ನಾನು ಎಲ್ಲ ರಾಜಕೀಯ ಪಕ್ಷಗಳ ಸಂವಿಧಾನಗಳನ್ನು ಓದಿದ್ದೇನೆ. ಯಾವುದೇ ಕಾಂಗ್ರೆಸಿಗ ಮದ್ಯಪಾನ ಮಾಡುವುದಿಲ್ಲ ಎಂದು ಕಾಂಗ್ರೆಸ್ ಸಂವಿಧಾನ ಹೇಳುತ್ತದೆ. ಕಾಂಗ್ರೆಸ್ ಸಂವಿಧಾನವನ್ನು ಯಾರೇ ಬರೆದಿರಲಿ, ಅವರು ಮದ್ಯಪಾನ ಮಾಡಿದ ಬಳಿಕ ಅದನ್ನು ಹೇಗೆ ಬರೆದಿರಬಹುದು ಎಂಬ ಬಗ್ಗೆ ನಾವು ಮಾತನಾಡುತ್ತಿದ್ದೆವು’ ಎಂದು ಕೇಜ್ರಿವಾಲ್ ಈ ವೀಡಿಯೊದಲ್ಲಿ ಹೇಳಿದ್ದರು.

ಸ್ಥಳೀಯ ಆಪ್ ನಾಯಕರ ದೂರುಗಳ ಮೇರೆಗೆ ಲುಧಿಯಾನಾದಲ್ಲಿ ಎಲ್ಲ ಎಫ್‌ ಐ ಆರ್‌ ಗಳು ದಾಖಲಾಗಿದ್ದು,ತಿರುಚಲಾದ ವೀಡಿಯೊಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಭಾವನೆಗಳಿಗೆ ಘಾಸಿಯನ್ನುಂಟು ಮಾಡಿವೆ ಎಂದು ಅವುಗಳಲ್ಲಿ ಹೇಳಲಾಗಿದೆ.

ಈ ವೀಡಿಯೊಗಳು ಪಂಜಾಬಿನಲ್ಲಿ ಶಾಂತಿಯನ್ನು ಕದಡುವ ಸಾಧ್ಯತೆಯಿದೆ ಮತ್ತು ಕೇಜ್ರಿವಾಲ್‌ರ ಪ್ರತಿಷ್ಠೆಗೆ ಕಳಂಕವನ್ನುಂಟು ಮಾಡಲು ಈ ವೀಡಿಯೊಗಳನ್ನು ಅಪಲೋಡ್ ಮಾಡಲಾಗಿತ್ತು ಎಂದು ಎಫ್‌ಐಆರ್‌ ಗಳಲ್ಲಿ ದೂರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News