ಮೋಹನ್ ಭಾಗವತ್ ರ ‘ಮಂದಿರ-ಮಸೀದಿ’ ಹೇಳಿಕೆಗೆ ಕಾವಿ ಪಡೆಯ ಆಕ್ರೋಶ
ಹೊಸದಿಲ್ಲಿ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಳಿಕ ಹೊಸದಾಗಿ ದೇವಸ್ಥಾನ-ಮಸೀದಿ ವಿವಾದಗಳು ತಲೆಯೆತ್ತುತ್ತಿರುವುದು ಸ್ವೀಕಾರಾರ್ಹವಲ್ಲ ಎಂಬ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗೆ ದೇಶಾದ್ಯಂತ ಪ್ರಮುಖ ಸಾಧುಸಂತರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಡಿ.19ರಂದು ಪುಣೆಯಲ್ಲಿ ಸಹಜೀವನ ವ್ಯಾಖ್ಯಾನಮಾಲಾದಲ್ಲಿ ‘ಭಾರತ-ವಿಶ್ವಗುರು’ ಕುರಿತು ಉಪನ್ಯಾಸ ನೀಡಿದ್ದ ಭಾಗವತ,‘ಪ್ರತಿದಿನ ಹೊಸ ವಿಷಯ(ವಿವಾದ) ಹುಟ್ಟಿಕೊಳ್ಳುತ್ತಿದೆ. ಇದಕ್ಕೆ ಅವಕಾಶ ನೀಡಲು ಹೇಗೆ ಸಾಧ್ಯ? ಇದು ಮುಂದುವರಿಯಲು ಸಾಧ್ಯವಿಲ್ಲ. ನಾವು ಒಟ್ಟಿಗೇ ಬದುಕಬಲ್ಲೆವು ಎನ್ನುವುದನ್ನು ಭಾರತವು ತೋರಿಸುವ ಅಗತ್ಯವಿದೆ ’ಎಂದು ಯಾವುದೇ ನಿರ್ದಿಷ್ಟ ತಾಣವನ್ನು ಉಲ್ಲೇಖಿಸದೆ ಹೇಳಿದ್ದರು.
ಭಾಗವತ್ ಅವರ ಎಚ್ಚರಿಕೆಯನ್ನು ಕಟುವಾಗಿ ಟೀಕಿಸಿರುವ ಅಖಿಲ ಭಾರತೀಯ ಸಂತ ಸಮಿತಿಯು,ಇಂತಹ ವಿಷಯಗಳನ್ನು ಧಾರ್ಮಿಕ ನಾಯಕರು ನಿರ್ಧರಿಸಬೇಕೇ ಹೊರತು ‘ಸಾಂಸ್ಕೃತಿಕ ಸಂಘಟನೆ’ಯಾಗಿರುವ ಆರೆಸ್ಸೆಸ್ ಅಲ್ಲ ಎಂದು ಒತ್ತಿ ಹೇಳಿದೆ.
ಧರ್ಮದ ವಿಷಯವು ಉದ್ಭವಿಸಿದಾಗ ಅದನ್ನು ಧಾರ್ಮಿಕ ಗುರುಗಳು ನಿರ್ಧರಿಸುತ್ತಾರೆ ಮತ್ತು ಅವರ ನಿರ್ಧಾರವನ್ನು ಸಂಘ ಮತ್ತು ವಿಹಿಂಪ ಒಪ್ಪಿಕೊಳ್ಳಬೇಕು ಎಂದು ಹೇಳಿದ ಸಮಿತಿಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಜಿತೇಂದ್ರಾನಂದ ಸರಸ್ವತಿ, 56 ವಿವಿಧ ಸ್ಥಳಗಳಲ್ಲಿ ದೇವಸ್ಥಾನ ರಚನೆಗಳನ್ನು ಗುರುತಿಸಲಾಗಿದ್ದು, ಇದು ಇಂತಹ ವಿಷಯಗಳಲ್ಲಿ ಸಾರ್ವಜನಿಕ ಹಿತಾಸಕ್ತಿಗಳನ್ನು ಒತ್ತಿ ಹೇಳುತ್ತದೆ ಎಂದರು.
ಉತ್ತರಾಖಂಡ ಜ್ಯೋತಿರ್ಮಠ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರೂ ದೇವಸ್ಥಾನಗಳ ಮರುಸ್ಥಾಪನೆ ಕುರಿತು ತನ್ನ ‘ರಾಜಕೀಯವಾಗಿ ಅನುಕೂಲಕರ’ ನಿಲುವಿಗಾಗಿ ರವಿವಾರ ಭಾಗವತ್ ರನ್ನು ಟೀಕಿಸಿದ್ದರು.
ಹಿಂದೆ ಆಕ್ರಮಣಕೋರರಿಂದ ನಾಶಗೊಂಡಿದ್ದ ದೇವಸ್ಥಾನಗಳ ಪಟ್ಟಿಯನ್ನು ಸಿದ್ಧಗೊಳಿಸಬೇಕು ಮತ್ತು ‘ಹಿಂದು ಹೆಮ್ಮೆಯ ಮರುಸ್ಥಾಪನೆ’ಗಾಗಿ ಇವುಗಳ ಪುರಾತತ್ವ ಶಾಸ್ತ್ರೀಯ ಸಮಿಕ್ಷೆಗಳನ್ನು ಕೈಗೊಳ್ಳಬೇಕು ಎಂದು ಹೇಳಿದ ಅವರು,ತನಗೆ ಅಧಿಕಾರ ಬೇಕು ಎಂದಾಗ ಭಾಗವತ್ ದೇವಸ್ಥಾನಗಳ ಕುರಿತು ಮಾತನಾಡುತ್ತಿದ್ದರು. ಈಗ ಅವರು ಅಧಿಕಾರವನ್ನು ಹೊಂದಿದ್ದು, ದೇವಸ್ಥಾನಗಳಿಗಾಗಿ ಹುಡುಕಬೇಡಿ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಹಿಂದೆ ಹಿಂದುಗಳ ಮೆಲೆ ಬಹಳಷ್ಟು ದೌರ್ಜನ್ಯಗಳು ನಡೆದಿದ್ದು, ಅವರ ಧಾರ್ಮಿಕ ಸ್ಥಳಗಳನ್ನು ನಾಶಗೊಳಿಸಲಾಗಿತ್ತು. ಈಗ ಹಿಂದು ಸಮಾಜವು ತನ್ನ ದೇವಸ್ಥಾನಗಳನ್ನು ಮರುಸ್ಥಾಪಿಸಲು ಮತ್ತು ಅವುಗಳನ್ನು ಸಂರಕ್ಷಿಸಲು ಬಯಸಿದರೆ ಅದರಲ್ಲಿ ತಪ್ಪೇನಿದೆ ಎಂದು ಸರಸ್ವತಿ ಪ್ರಶ್ನಿಸಿದರು.
ಇದೇ ಮೊದಲ ಬಾರಿಗೆ ಭಾಗವತ್ ದೇಶದಲ್ಲಿಯ ಕಾವಿ ಪಡೆಯಿಂದ ಇಂತಹ ನೇರ ಪ್ರತಿರೋಧವನ್ನು ಎದುರಿಸುತ್ತಿದ್ದಾರೆ.