ಜನರು ಬೆಲೆಯೇರಿಕೆಯಿಂದ ನರಳುತ್ತಿದ್ದರೂ, ಮೋದಿ ಸರಕಾರ ಕುಂಭಕರ್ಣನಂತೆ ನಿದ್ರಿಸುತ್ತಿದೆ: ರಾಹುಲ್ ಗಾಂಧಿ

ರಾಹುಲ್ ಗಾಂಧಿ | PC : X\ @RahulGandhi
ಹೊಸದಿಲ್ಲಿ: ಜನರು ಬೆಲೆಯೇರಿಕೆಯಿಂದ ನರಳುತ್ತಿದ್ದು, ತಮ್ಮ ದೈನಂದಿನ ಜೀವನದಲ್ಲಿ ಸಣ್ಣಪುಟ್ಟ ವಿಷಯಗಳಿಗೂ ರಾಜಿ ಮಾಡಿಕೊಳ್ಳಬೇಕಾದ ಅನಿವಾರ್ಯತೆಗೆ ತುತ್ತಾಗಿದ್ದಾರೆ. ಆದರೆ, ಸರಕಾರ ಮಾತ್ರ ಕುಂಭಕರ್ಣನಂತೆ ನಿದ್ರಿಸುತ್ತಿದೆ ಎಂದು ಮಂಗಳವಾರ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ದಿಲ್ಲಿಯ ಗಿರಿನಗರ ತರಕಾರಿ ಮಾರುಕಟ್ಟೆಗೆ ತೆರಳಿ, ಗೃಹಿಣಿಯರೊಂದಿಗೆ ನಡೆಸಿದ್ದ ಸಂವಾದದ ವಿಡಿಯೊವನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ಆಹಾರ ಪದಾರ್ಥಗಳ ಬೆಲೆಯೇರಿಕೆಯಿಂದ ಅವರು ಅನುಭವಿಸುತ್ತಿರುವ ಸಮಸ್ಯೆಗಳನ್ನು ನಿರೂಪಿಸಿದ್ದಾರೆ.
“ಕೆಲ ದಿನಗಳ ಹಿಂದೆ ನಾನು ಸ್ಥಳೀಯ ಮಾರುಕಟ್ಟೆಗೆ ತೆರಳಿದ್ದೆ ಹಾಗೂ ಗ್ರಾಹಕರೊಂದಿಗೆ ವ್ಯಾಪಾರ ಮಾಡಿದ್ದೆ. ಈ ಸಂದರ್ಭದಲ್ಲಿ ಸಾಮಾನ್ಯ ಜನರ ಖರ್ಚುವೆಚ್ಚ ಹೇಗೆ ಇಳಿಕೆಯಾಗುತ್ತಿದೆ ಹಾಗೂ ಹಣದುಬ್ಬರ ಹೇಗೆ ಎಲ್ಲರನ್ನೂ ಬಾಧಿಸುತ್ತಿದೆ ಎಂಬ ಕುರಿತು ವ್ಯಾಪಾರಿಗಳೊಂದಿಗೆ ಮಾತುಕತೆ ನಡೆಸಿದ್ದೆ” ಎಂದು ಅವರು ತಮ್ಮ ಪೋಸ್ಟ್ ನೊಂದಿಗೆ ವಿಡಿಯೊವನ್ನು ಹಂಚಿಕೊಂಡು ಹೇಳಿದ್ದಾರೆ.
“लहसुन कभी ₹40 था, आज ₹400!”
— Rahul Gandhi (@RahulGandhi) December 24, 2024
बढ़ती महंगाई ने बिगाड़ा आम आदमी की रसोई का बजट - कुंभकरण की नींद सो रही सरकार! pic.twitter.com/U9RX7HEc8A
“ಜನರು ಬೆಲೆಯೇರಿಕೆಯಿಂದ ನರಳುತ್ತಿದ್ದಾರೆ ಹಾಗೂ ತಮ್ಮ ದೈನಂದಿನ ಜೀವನದಲ್ಲಿ ಸಣ್ಣಪುಟ್ಟ ವಿಷಯಗಳಿಗೂ ರಾಜಿ ಮಾಡಿಕೊಳ್ಳುತ್ತಿದ್ದಾರೆ” ಎಂದು ಅವರು ಬರೆದುಕೊಂಡಿದ್ದಾರೆ.
ರಾಹುಲ್ ಗಾಂಧಿ ಹಂಚಿಕೊಂಡಿರುವ ಸುಮಾರು ಐದು ನಿಮಿಷಗಳ ವಿಡಿಯೊದಲ್ಲಿ, ವ್ಯಾಪಾರಿಗಳ ಬಳಿ ತರಕಾರಿ ಕೊಳ್ಳುತ್ತಿರುವ, ಅವರೊಂದಿಗೆ ಚೌಕಾಸಿ ಮಾಡುತ್ತಿರುವ ಗೃಹಿಣಿಯರೊಂದಿಗೆ ಅವರು ಮಾತುಕತೆ ನಡೆಸುತ್ತಿರುವುದನ್ನು ಕಾಣಬಹುದಾಗಿದೆ.
“ಒಂದು ಕಾಲದಲ್ಲಿ ಬೆಳ್ಳುಳ್ಳಿಯ ಬೆಲೆ ಕೆಜಿಗೆ 40 ರೂಪಾಯಿ ಇತ್ತು. ಅದೀಗ 400 ರೂಪಾಯಿ ಆಗಿದೆ! ಹಣದುಬ್ಬರದ ಏರಿಕೆಯಿಂದ ಸಾಮಾನ್ಯ ಜನರ ಅಡುಗೆ ಕೋಣೆಯ ಖರ್ಚುವೆಚ್ಚ ಹಾಳಾಗಿದೆ. ಆದರೆ, ಸರಕಾರ ಮಾತ್ರ ಕುಂಭಕರ್ಣನಂತೆ ನಿದ್ರಿಸುತ್ತಿದೆ!” ಎಂದು ಅವರು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ತಿವಿದಿದ್ದಾರೆ.
ಸರಕಾರದ ಆರ್ಥಿಕ ನಿರ್ವಹಣೆ, ನಿರುದ್ಯೋಗ ಹಾಗೂ ಬೆಲೆಯೇರಿಕೆಯ ವಿರುದ್ಧ ಕಾಂಗ್ರೆಸ್ ಮೊದಲಿನಿಂದಲೂ ದಾಳಿ ನಡೆಸುತ್ತಾ ಬರುತ್ತಿದೆ.