ಮಣಿಪುರ | ನದಿಯಲ್ಲಿ ಮೂವರ ಮೃತದೇಹ ಪತ್ತೆ
ಗುವಾಹಟಿ: ಸಂಘರ್ಷ ಪೀಡಿತ ಮಣಿಪುರದಲ್ಲಿ ಶುಕ್ರವಾರ ಮಹಿಳೆ ಮತ್ತು ಇಬ್ಬರು ಅಪ್ರಾಪ್ತರ ಮೃತದೇಹಗಳು ನದಿಯಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನವೆಂಬರ್ 7 ರಂದು ಜಿರಿಬಾಮ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದ ವೇಳೆ ನಾಪತ್ತೆಯಾದ ಆರು ಮೈತೈ ಮಹಿಳೆಯರು ಮತ್ತು ಮಕ್ಕಳಲ್ಲಿ ಇವರೂ ಸೇರಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಜಿರಿ ನದಿಯಲ್ಲಿ ಪತ್ತೆಯಾದ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ನೆರೆಯ ಅಸ್ಸಾಂನ ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಮಣಿಪುರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನುಳಿದ ಮೂವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಮಣಿಪುರ ಪೊಲೀಸರು ಅಥವಾ ಸರ್ಕಾರದಿಂದ ಈ ಕುರಿತು ಯಾವುದೇ ಖಚಿತ ಮಾಹಿತಿ ಬಂದಿಲ್ಲ.
ನವೆಂಬರ್ 7 ರಂದು ಜಿರಿಬಾಮ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಆರು ಮಂದಿ ನಾಪತ್ತೆಯಾಗಿದ್ದರು. ಹ್ಮಾರ್ ಸಮುದಾಯಕ್ಕೆ ಸೇರಿದ 10 ಶಸ್ತ್ರಸಜ್ಜಿತ ಉಗ್ರಗಾಮಿಗಳು ಸಿಆರ್‌ಪಿಎಫ್ ಮತ್ತು ಮಣಿಪುರ ಪೊಲೀಸ್ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದರು.