ಬೃಜ್ ಭೂಷಣ್ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ | ನ.26ರಂದು ಕುಸ್ತಿಪಟುಗಳ ಸಾಕ್ಷ್ಯ ದಾಖಲಿಸಿಕೊಳ್ಳಲಿರುವ ದಿಲ್ಲಿ ನ್ಯಾಯಾಲಯ
ಹೊಸದಿಲ್ಲಿ: ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬೃಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಆರು ಮಂದಿ ಮಹಿಳಾ ಕುಸ್ತಿಪಟುಗಳ ಸಾಕ್ಷ್ಯವನ್ನು ನವೆಂಬರ್ 26ರಂದು ದಿಲ್ಲಿ ನ್ಯಾಯಾಲಯ ದಾಖಲಿಸಿಕೊಳ್ಳುವುದನ್ನು ಪುನಾರಂಭಿಸಲಿದೆ.
ನವೆಂಬರ್ 14ರಂದು ದೂರುದಾರರೊಬ್ಬರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ವೈಭವ್ ಚೌರಾಸಿಯಾ, ಪ್ರಕರಣದ ವಿಚಾರಣೆಯನ್ನು ಮುಂದೂಡಿದ್ದರು. ವಿಚಾರಣೆಯು ನ್ಯಾಯಾಧೀಶರ ಕೊಠಡಿಯಲ್ಲಿ ನಡೆದಿತ್ತು.
ಈ ಪ್ರಕರಣದಲ್ಲಿ ಬೃಜ್ ಭೂಷಣ್ ವಿರುದ್ಧ ಕೇಳಿ ಬಂದಿದ್ದ ಲೈಂಗಿಕ ದೌರ್ಜನ್ಯ ಹಾಗೂ ಮಹಿಳೆಯ ಘನತೆಗೆ ಕುಂದುಂಟಾಗುವಂತೆ ಬಲವಂತವಾಗಿ ನಡೆದುಕೊಳ್ಳಲಾಗಿದೆ ಎಂಬ ದೋಷಾರೋಪಗಳನ್ನು ಮೇ 21ರಂದು ನ್ಯಾಯಾಲಯ ನಿಗದಿಗೊಳಿಸಿತ್ತು. ಆದರೆ, ನಾನು ಅಪರಾಧಿಯಲ್ಲ ಎಂದು ವಾದಿಸಿದ್ದ ಸಿಂಗ್, ವಿಚಾರಣೆಗೆ ಮನವಿ ಮಾಡಿದ್ದರು.
ಇದರೊಂದಿಗೆ ಬೃಜ್ ಭೂಷಣ್ ವಿರುದ್ಧ ನ್ಯಾಯಾಧೀಶರು ಕ್ರಿಮಿನಲ್ ಬೆದರಿಕೆ ದೋಷಾರೋಪವನ್ನೂ ನಿಗದಿಗೊಳಿಸಿದ್ದರು. ಅಲ್ಲದೆ, ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಸಹಾಯಕ ಕಾರ್ಯದರ್ಶಿ ಹಾಗೂ ಸಹ ಆರೋಪಿ ವಿನೋದ್ ತೋಮರ್ ವಿರುದ್ಧವೂ ಕ್ರಿಮಿನಲ್ ಬೆದರಿಕೆಯ ದೋಷಾರೋಪವನ್ನು ನ್ಯಾಯಾಲಯ ನಿಗದಿಗೊಳಿಸಿತ್ತು.