ವಿಧಾನಸಭಾ ಚುನಾವಣೆಗೆ ಮುನ್ನ ದಿಲ್ಲಿಯಲ್ಲಿ ವಿಶ್ವ ಹಿಂದೂ ಪರಿಷತ್ ನಿಂದ 50,000 ತ್ರಿಶೂಲ ವಿತರಣೆ; ವರದಿ

Update: 2024-12-25 10:46 GMT

Photo credit: thewire.in

ಹೊಸದಿಲ್ಲಿ: ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಯುವ ನಿರೀಕ್ಷೆಯಿರುವ ದಿಲ್ಲಿ ವಿಧಾನಸಭೆ ಚುನಾವಣೆಗಾಗಿ ವಿವಿಧ ರಾಜಕೀಯ ಪಕ್ಷಗಳು ಸಜ್ಜಾಗಿದ್ದು, ಚುನಾವಣಾ ಪ್ರಚಾರ ಕಾವು ಪಡೆದುಕೊಳ್ಳುತ್ತಿದೆ. ಈ ನಡುವೆ ರಾಷ್ಟ್ರ ರಾಜಧಾನಿಯಲ್ಲಿ ಬೃಹತ್ ಪ್ರಮಾಣದಲ್ಲಿ ತ್ರಿಶೂಲಗಳನ್ನು ವಿತರಿಸಲು ವಿಶ್ವ ಹಿಂದೂ ಪರಿಷತ್ (ವಿಹಿಂಪ) ಯೋಜಿಸಿದೆ. ಈಗಾಗಲೇ ಏಳರಿಂದ ಎಂಟು ಸಾವಿರ ತ್ರಿಶೂಲಗಳನ್ನು ವಿತರಿಸಲಾಗಿದ್ದು,ಚುನಾವಣೆಗೆ ಮುನ್ನ 50,000ಕ್ಕೂ ಅಧಿಕ ತ್ರಿಶೂಲಗಳನ್ನು ವಿತರಿಸುವ ಗುರಿಯನ್ನು ಅದು ಹೊಂದಿದೆ. ಆದರೆ ತ್ರಿಶೂಲ ವಿತರಣೆಗೂ ಚುನಾವಣೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಅದು ಹೇಳಿಕೊಂಡಿದೆ ಎಂದು thewire.in ವರದಿ ಮಾಡಿದೆ.

ಡಿ.15ರಿಂದ ತ್ರಿಶೂಲ ಅಭಿಯಾನ ಆರಂಭಗೊಂಡಿದ್ದು,ಅಂದು ಮೊದಲ ವಿತರಣಾ ಕಾರ್ಯಕ್ರಮವು ಪಹಾಡಗಂಜ್‌ನಲ್ಲಿ ನಡೆದಿತ್ತು. ಮುಂದಿನ ಕಾರ್ಯಕ್ರಮ ಜ.19ರಂದು ನಡೆಯಲಿದೆ. ಈ ಕಾರ್ಯಕ್ರಮಗಳು ಎಲ್ಲರಿಗೂ ಮುಕ್ತವಾಗಿದ್ದು,ಯಾರು ಬೇಕಾದರೂ ತ್ರಿಶೂಲಗಳನ್ನು ಸ್ವೀಕರಿಸಬಹುದು.

ಈ ನಿರ್ದಿಷ್ಟ ತ್ರಿಶೂಲವನ್ನು ಶಸ್ತ್ರಾಸ್ತ್ರಗಳ ಕಾಯ್ದೆಯ ವ್ಯಾಪ್ತಿಗೆ ಒಳಪಡದಂತೆ ವಿನ್ಯಾಸಗೊಳಿಸಲಾಗಿದೆ.

‘ನೀವೆಲ್ಲರೂ ನಿಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದಿರಬೇಕು. ಒಂದು ರೀತಿಯಲ್ಲಿ ಇದು ವಿಹಿಂಪನ ಯುವಘಟಕ ಬಜರಂಗ ದಳಕ್ಕೆ ಸದಸ್ಯರ ಸೇರ್ಪಡೆ ಕಾರ್ಯಕ್ರಮವೂ ಹೌದು’ ಎಂಬ ವಾಟ್ಸ್‌ಆ್ಯಪ್ ಸಂದೇಶದ ಮೂಲಕ ವಿಹಿಂಪ ಸಾರ್ವಜನಿಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದೆ.

ಬಹಳ ಸಮಯದ ಬಳಿಕ ದಿಲ್ಲಿಯಲ್ಲಿ ತ್ರಿಶೂಲಗಳನ್ನು ವಿತರಿಸಲಾಗುತ್ತಿದೆ. ವಿಹಿಂಪ ದಿಲ್ಲಿ ಘಟಕದ ಕಾರ್ಯದರ್ಶಿ ಸುರೇಂದ್ರ ಗುಪ್ತಾ ಪ್ರಕಾರ ದಿಲ್ಲಿಯಲ್ಲಿ 2012 ಅಥವಾ 2015ರಲ್ಲಿ ಕೊನೆಯ ಬಾರಿಗೆ ತ್ರಿಶೂಲಗಳನ್ನು ವಿತರಿಸಲಾಗಿತ್ತು.

ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಹಳ ಸಮಯದ ಬಳಿಕ ತ್ರಿಶೂಲಗಳನ್ನು ವಿತರಿಸಲಾಗುತ್ತಿದೆಯೇ ಎಂಬ ಸುದ್ದಿಸಂಸ್ಥೆಯ ಪ್ರಶ್ನೆಗೆ ಗುಪ್ತಾ,‘ನಾವು ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ. ಅದೇ ನಮ್ಮ ಉದ್ದೇಶವಾಗಿದ್ದರೆ ಲೋಕಸಭಾ ಚುನಾವಣೆಗಳು ಅಥವಾ ಅದಕ್ಕೂ ಮೊದಲು ನಡೆದಿದ್ದ ಮುನ್ಸಿಪಲ್ ಚುನಾವಣೆಗಳ ಸಂದರ್ಭದಲ್ಲಿಯೂ ತ್ರಿಶೂಲಗಳನ್ನು ವಿತರಿಸುತ್ತಿದ್ದೆವು. ಹಿಂದು ಸಮಾಜದ ರಕ್ಷಣೆಗಾಗಿ ವಿಹಿಂಪ ಮತ್ತು ಬಜರಂಗ ದಳ ಕಾರ್ಯಕರ್ತರು ತೆಗೆದುಕೊಂಡಿರುವ ನಿರ್ಣಯವು ಚುನಾವಣೆಗಳನ್ನು ಆಧರಿಸಿಲ್ಲ’ ಎಂದು ಉತ್ತರಿಸಿದರು.

ಆದಾಗ್ಯೂ ಪಹಾಡಗಂಜ್ ಕಾರ್ಯಕ್ರಮದಲ್ಲಿ ಬಾಂಗ್ಲಾದೇಶಿ ನುಸುಳುಕೋರರ ವಿಷಯ ಪ್ರತಿಧ್ವನಿಸಿತ್ತು. ಇದು ಬಿಜೆಪಿಯ ಪ್ರಮುಖ ಚುನಾವಣಾ ವಿಷಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News