Fact Check: ಉತ್ತರಾಖಂಡದಲ್ಲಿ ವ್ಯಕ್ತಿಯೋರ್ವ ಬೈಕ್ ಸೀಟ್ ಕವರ್‌ಗಳನ್ನು ಹರಿಯುತ್ತಿದ್ದ ವೀಡಿಯೊಗೆ ಕೋಮು ಬಣ್ಣ; ಸತ್ಯಾಂಶವೇನು?
ಹೊಸದಿಲ್ಲಿ: ವ್ಯಕ್ತಿಯೋರ್ವ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಸೀಟ್ ಕವರ್‌ಗಳನ್ನು ಬ್ಲೇಡ್‌ನಿಂದ ಹರಿದು ಹಾಕುತ್ತಿದ್ದನ್ನು ತೋರಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ವೀಡಿಯೊದಲ್ಲಿಯ ವ್ಯಕ್ತಿಯನ್ನು ಮುಹಮ್ಮದ್ ಜುನೈದ್ ಎಂದು ಹೆಸರಿಸಲಾಗಿದ್ದು, ಆತ ತನ್ನ ಸೀಟ್ ಕವರ್ ಮತ್ತು ಪಂಕ್ಚರ್ ಅಂಗಡಿಯ ವ್ಯವಹಾರವನ್ನು ಹೆಚ್ಚಿಸಿಕೊಳ್ಳಲು ಈ ಕೆಲಸವನ್ನು ಮಾಡಿದ್ದಾನೆ ಎಂದು ಹೇಳಲಾಗಿತ್ತು. ಈ ವೀಡಿಯೊವನ್ನು ಕೋಮು ಉದ್ವಿಗ್ನತೆಯನ್ನು ಹರಡಲು ಶೇರ್ ಮಾಡಿಕೊಳ್ಳಲಾಗಿತ್ತು ಎನ್ನುವುದು ಈಗ ಬಹಿರಂಗಗೊಂಡಿದೆ.
ವೀಡಿಯೊದ ಸತ್ಯಾಸತ್ಯತೆಯ ಪರಿಶೀಲನೆ ನಡೆಸಿದ boomlive.in ಜಾಲತಾಣವು ಅದರಲ್ಲಿ ಸೀಟ್ ಕವರ್‌ಗಳನ್ನು ಹರಿಯುತ್ತಿದ್ದ ವ್ಯಕ್ತಿಯನ್ನು ಉತ್ತರಾಖಂಡದ ಡೆಹ್ರಾಡೂನಿನ ಶಿಕ್ಷಕ ಧೀರಜ ಅಗರವಾಲ್ ಎಂದು ಪತ್ತೆ ಹಚ್ಚಿದೆ. 2024,ಆಗಸ್ಟ್‌ನಲ್ಲಿ ಪಾರ್ಕಿಂಗ್ ವಿವಾದದಿಂದಾಗಿ ಅವರು ಈ ಕೆಲಸವನ್ನು ಮಾಡಿದ್ದರು. ವೀಡಿಯೊ ಚಿತ್ರೀಕರಿಸಲಾದ ಸ್ಥಳದ ಬಳಿಯೇ ಅವರು ಕೋಚಿಂಗ್ ಸೆಂಟರ್ ನಡೆಸುತ್ತಿದ್ದಾರೆ ಎನ್ನುವುದನ್ನು ʼಬೂಮ್ʼ ಬಯಲಿಗೆಳೆದಿದೆ.
ವೈರಲ್ ಆಗಿದ್ದ ವಿಡಿಯೋದಲ್ಲಿದ್ದ ‘ಉತ್ತರಾಖಂಡ ಎಕ್ಸಕ್ಲೂಸಿವ್’ ಲೋಗೋದಿಂದ ಸುಳಿವು ಪಡೆದುಕೊಂಡ ʼಬೂಮ್ʼ,ಈ ಹ್ಯಾಂಡಲ್‌ನ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಪುಟವನ್ನು ಪತ್ತೆ ಹಚ್ಚಿತ್ತು. ಬಳಿಕ ಅದು ಪುಟದ ಅಡ್ಮಿನ್ ಗೌರವ ವಾಸುದೇವರನ್ನು ಸಂಪರ್ಕಿಸಿದ್ದು,ಸದ್ರಿವೀಡಿಯೊವನ್ನು ಆ.2024ರಲ್ಲಿ ತನ್ನ ಪುಟದಲ್ಲಿ ಅಪ್‌ಲೋಡ್ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದರು. ಈ ವಿಡಿಯೊವನ್ನು ಬಳಿಕ ಅಳಿಸಲಾಗಿದೆ.
ವೀಡಿಯೊದಲ್ಲಿಯ ಘಟನೆ ಡೆಹ್ರಾಡೂನ್‌ನ ನೆಹರು ಗ್ರಾಮದ ದೋಭಾಲ್ ಚೌಕ್‌ನಲ್ಲಿ ನಡೆದಿತ್ತು. ವೀಡಿಯೊದಲ್ಲಿದ್ದ ವ್ಯಕ್ತಿ ಮುಹಮ್ಮದ್ ಜುನೈದ್ ಅಲ್ಲ,ಕೋಚಿಂಗ್ ಸೆಂಟರ್ ಮಾಲಿಕ ಧೀರಜ ಅಗರವಾಲ್ ಎಂದು ವಾಸುದೇವ ದೃಢಪಡಿಸಿದರು.
ಬೂಮ್ ಬಳಿಕ ಅಗರವಾಲ್‌ರನ್ನು ಸಂಪರ್ಕಿಸಿದ್ದು, ದ್ವಿಚಕ್ರ ದ್ವಿಚಕ್ರ ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್ ತನಗೆ ಕಿರಿಕಿರಿಯನ್ನುಂಟು ಮಾಡಿತ್ತು. ಈ ವಾಹನಗಳ ಮಾಲಿಕರಿಗೆ ಪಾಠ ಕಲಿಸಲೆಂದು ತಾನು ಸೀಟ್‌ಗಳ ಕವರ್ ಹರಿದಿದ್ದೆ. ಈ ವಿಷಯ ಪೋಲಿಸ್ ಠಾಣೆಯ ಮೆಟ್ಟಿಲೇರಿತ್ತು,ತನ್ನನ್ನು ತರಾಟೆಗೆ ತೆಗೆದುಕೊಂಡಿದ್ದ ಪೋಲಿಸರು ತನ್ನ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿರಲಿಲ್ಲ ಎಂದು ತಿಳಿಸಿದರು. ಕೋಮು ಉದ್ವಿಗ್ನತೆಯನ್ನು ಹರಡಲು ತನ್ನನ್ನು ‘ಮುಹಮ್ಮದ್ ಜುನೈದ್’ ಎಂದು ತಪ್ಪಾಗಿ ಬಿಂಬಿಸಿ ವೀಡಿಯೊವನ್ನು ಶೇರ್ ಮಾಡಲಾಗಿತ್ತು ಎಂದರು.
ಈ ಲೇಖನವನ್ನು ಮೊದಲು boomlive.in ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್ʼನ ಭಾಗವಾಗಿ ವಾರ್ತಾ ಭಾರತಿ ಅನುವಾದಿಸಿದೆ.