ವಕ್ಫ್ ಭೂಮಿ ವಿವಾದ | ನಾಳೆ ಜೆಪಿಸಿ ಮುಂದೆ ಕರ್ನಾಟಕದ ಅಧಿಕಾರಿಗಳ ಹಾಜರಾತಿ
ಹೊಸದಿಲ್ಲಿ : ಕರ್ನಾಟಕದಲ್ಲಿ ವಕ್ಫ್ ಭೂಮಿ ಕುರಿತು ವಿವಾದದ ನಡುವೆ ರಾಜ್ಯ ಸರಕಾರದ ಅಧಿಕಾರಿಗಳು ಗುರುವಾರ ವಕ್ಫ್ ತಿದ್ದುಪಡಿ ಮಸೂದೆಯನ್ನು ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯ ಮುಂದೆ ಹಾಜರಾಗಲಿದ್ದಾರೆ.
ಬಿಜೆಪಿ ಸಂಸದ ಜಗದಾಂಬಿಕ ಪಾಲ್ ಅಧ್ಯಕ್ಷತೆಯ ಜೆಪಿಸಿಯು ಗುರುವಾರದಿಂದ ಎರಡು ದಿನಗಳ ಕಾಲ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಒಡಿಶಾ ಮತ್ತು ದಿಲ್ಲಿ ಸರಕಾರಗಳ ಪ್ರತಿನಿಧಿಗಳ ಅಭಿಪ್ರಾಯಗಳನ್ನು ಆಲಿಸಲಿದೆ.
ದಿಲ್ಲಿಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಇಮ್ರಾನ್ ಹುಸೇನ್ ಅವರು ಶುಕ್ರವಾರ ಸಮಿತಿಯನ್ನು ಉದ್ದೇಶಿಸಿ ಮಾತನಾಡಲಿದ್ದು, ಬಳಿಕ ದಿಲ್ಲಿ ಸರಕಾರದ ಪ್ರತಿನಿಧಿಗಳು ಸಾಕ್ಷ್ಯಗಳನ್ನು ದಾಖಲಿಸಲಿದ್ದಾರೆ.
ವಕ್ಫ್ ಮಂಡಳಿಯು ರೈತರಿಗೆ ಸೇರಿದ 1,500 ಎಕರೆಗೂ ಹೆಚ್ಚಿನ ಭೂಮಿಯನ್ನು ವಶಪಡಿಸಿಕೊಳ್ಳುತ್ತಿದೆ ಎಂಬ ಬಿಜೆಪಿ ನಾಯಕರ ಆರೋಪಗಳ ಕುರಿತ ವಿವಾದದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರಕಾರದ ಅಧಿಕಾರಿಗಳು ಜೆಪಿಸಿ ಮುಂದೆ ತಮ್ಮ ಹೇಳಿಕೆಗಳನ್ನು ದಾಖಲಿಸಲಿದ್ದಾರೆ.
ಕರ್ನಾಟಕಕ್ಕೆ ಭೇಟಿ ನೀಡಿದ್ದ ಪಾಲ್, ವಕ್ಫ್ ಮಂಡಳಿಗೆ ಸೇರಿದ ಆಸ್ತಿಗಳ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದಿಂದ ನೋಟಿಸ್‌ಗಳನ್ನು ಸ್ವೀಕರಿಸಿದ್ದ ರೈತರೊಂದಿಗೆ ಮಾತುಕತೆಗಳನ್ನು ನಡೆಸಿದ್ದರು.
ಸಾಚಾರ್ ಸಮಿತಿಯ ವರದಿಯಂತೆ ಅನಧಿಕೃತ ರೀತಿಯಲ್ಲಿ ವಶಪಡಿಸಿಕೊಂಡಿರುವ ವಕ್ಫ್ ಆಸ್ತಿಗಳ ವಿವರಗಳನ್ನು ಕೋರಿ ಜೆಪಿಸಿಯು ರಾಜ್ಯ ಸರಕಾರಗಳಿಗೆ ಪತ್ರವನ್ನೂ ಬರೆದಿತ್ತು.
ದೇಶದಲ್ಲಿಯ ಮುಸ್ಲಿಮ್ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಕುರಿತು ಅಧ್ಯಯನ ನಡೆಸಲು ಯುಪಿಎ ಸರಕಾರವು 2005ರಲ್ಲಿ ಸಾಚಾರ್ ಸಮಿತಿಯನ್ನು ರಚಿಸಿತ್ತು.