ಉತ್ತರ ಪ್ರದೇಶ : ವಕ್ಫ್ ಮಸೂದೆ ವಿರುದ್ಧ ಪ್ರತಿಭಟನೆ; 24 ಮಂದಿಗೆ ನೋಟಿಸ್ ಜಾರಿ

PC : PTI
ಮುಝಾಫರ್ ನಗರ್: ವಕ್ಫ್ (ತಿದ್ದುಪಡಿ) ಮಸೂದೆ ವಿರುದ್ಧ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ 24 ಮಂದಿಯ ವಿರುದ್ಧ ಉತ್ತರಪ್ರದೇಶದ ಮುಝಾಪ್ಫರ್ ನಗರ್ ಜಿಲ್ಲೆಯ ಅಧಿಕಾರಿಗಳು ನೋಟಿಸು ಜಾರಿ ಮಾಡಿದ್ದಾರೆ. ಅಲ್ಲದೆ, ತಲಾ 2 ಲಕ್ಷ ರೂ. ಬಾಂಡ್ ಸಲ್ಲಿಸುವಂತೆ ನಿರ್ದೇಶಿಸಿದ್ದಾರೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡ 24 ಮಂದಿಗೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸ್ ಅಧೀಕ್ಷಕ (ನಗರ) ಸತ್ಯನಾರಾಯಣ ಪ್ರಜಾಪತಿ ಶನಿವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಯ ಆಧಾರದಲ್ಲಿ ಪೊಲೀಸರು ಹೆಚ್ಚಿನ ಜನರನ್ನು ಗುರುತಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪೊಲೀಸ್ ವರದಿಯ ಆಧಾರದಲ್ಲಿ ನಗರ ಮ್ಯಾಜಿಸ್ಟ್ರೇಟ್ ವಿಕಾಸ್ ಕಶ್ಯಪ್ ನೋಟಿಸು ಜಾರಿ ಮಾಡಿದ್ದಾರೆ. ಎಪ್ರಿಲ್ 16ರಂದು ನ್ಯಾಯಾಲಯದ ಮುಂದೆ ಹಾಜರಾದ ಬಳಿಕ ಪ್ರತಿಯೊಬ್ಬರು ತಲಾ 2 ಲಕ್ಷ ರೂ. ಬಾಂಡ್ ಗಳನ್ನು ಸಲ್ಲಿಸುವಂತೆ ನಿರ್ದೇಶಿಸಿದ್ದಾರೆ.
ಇವರು ಮಾರ್ಚ್ 28ರಂದು ವಿವಿಧ ಮಸೀದಿಗಳಲ್ಲಿ ರಮಝಾನ್‌ನ ಕೊನೆಯ ಶುಕ್ರವಾರದ ಪ್ರಾರ್ಥನೆಯ ಸಂದರ್ಭ ತಮ್ಮ ತೋಳುಗಳಿಗೆ ಕಪ್ಪು ಪಟ್ಟಿಗಳನ್ನು ಧರಿಸಿ ವಕ್ಫ್ (ತಿದ್ದುಪಡಿ) ಮಸೂದೆ ವಿರೋಧಿಸಿ ಪ್ರತಿಭಟಿಸುತ್ತಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೋಟಿಸು ಸ್ವೀಕರಿಸಿದ ವ್ಯಕ್ತಿಗಳು, ನಾವು ಪ್ರತಿಭಟನೆಯನ್ನು ಪ್ರಜಾಪ್ರಭುತ್ವದ ಮಾರ್ಗದಲ್ಲಿ ದಾಖಲಿಸಲು ಕಪ್ಪು ಪಟ್ಟಿಗಳನ್ನು ಧರಿಸಿದ್ದೆವು ಎಂದು ಹೇಳಿದ್ದಾರೆ.