3ನೇ ಏಕದಿನ: ಪಾಕಿಸ್ತಾನ ವಿರುದ್ಧ 43 ರನ್ ಜಯ

Update: 2025-04-05 20:35 IST
3ನೇ ಏಕದಿನ: ಪಾಕಿಸ್ತಾನ ವಿರುದ್ಧ 43 ರನ್ ಜಯ

PC : NDTV 

  • whatsapp icon

ಮೌಂಟ್ ಮೌಂಗ್‌ನುಯಿ: ಮೂರನೇ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯವನ್ನು 43 ರನ್ ಅಂತರದಿಂದ ಸೋತಿರುವ ಪಾಕಿಸ್ತಾನ ಕ್ರಿಕೆಟ್ ತಂಡವು ತನ್ನ ನ್ಯೂಝಿಲ್ಯಾಂಡ್ ಪ್ರವಾಸವನ್ನು ನಿರಾಶೆಯೊಂದಿಗೆ ಕೊನೆಗೊಳಿಸಿದೆ.

ಒದ್ದೆ ಮೈದಾನದ ಹಿನ್ನೆಲೆಯಲ್ಲಿ ಪಂದ್ಯವನ್ನು 42 ಓವರ್‌ ಗಳಿಗೆ ಸೀಮಿತಗೊಳಿಸಲಾಯಿತು. ನ್ಯೂಝಿಲ್ಯಾಂಡ್‌ನ 8 ವಿಕೆಟ್‌ಗಳ ನಷ್ಟಕ್ಕೆ 264 ರನ್‌ಗೆ ಉತ್ತರವಾಗಿ ಪಾಕಿಸ್ತಾನ ತಂಡವು 40 ಓವರ್‌ಗಳಲ್ಲಿ 221 ರನ್ ಗಳಿಸಿ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು.

ಕಿವೀಸ್ ತಂಡದ ವೇಗದ ಬೌಲರ್ ಬೆನ್ ಸೀಯರ್ಸ್ 34 ರನ್‌ಗೆ ಐದು ವಿಕೆಟ್‌ಗಳನ್ನು ಉರುಳಿಸಿದ್ದು, ಸತತ 2ನೇ ಪಂದ್ಯದಲ್ಲಿ 2ನೇ ಬಾರಿ ಐದು ವಿಕೆಟ್ ಗೊಂಚಲು ಕಬಳಿಸಿದರು.

ಆರಂಭಿಕ ಆಟಗಾರ ಇಮಾಮುಲ್‌ ಹಕ್(1 ರನ್) 3ನೇ ಓವರ್‌ನಲ್ಲಿ ಗಾಯಗೊಂಡು ನಿವೃತ್ತಿಯಾದ ಹೊರತಾಗಿಯೂ ಪಾಕಿಸ್ತಾನ ತಂಡ ಉತ್ತಮ ಆರಂಭ ಪಡೆಯಿತು. ಹಕ್ ಮೈದಾನವನ್ನು ತೊರೆದ ನಂತರ ಬಾಬರ್ ಆಝಮ್(50 ರನ್, 58 ಎಸೆತ) ಅರ್ಧಶತಕವನ್ನು ಗಳಿಸಿದ್ದಲ್ಲದೆ, ಅಬ್ದುಲ್ಲಾ ಶಫೀಕ್(33 ರನ್) ಹಾಗೂ ನಾಯಕ ಮುಹಮ್ಮದ್ ರಿಝ್ವಾನ್(37 ರನ್) ಅವರೊಂದಿಗೆ ಉತ್ತಮ ಜೊತೆಯಾಟ ನಡೆಸಿದರು.

10 ಓವರ್‌ ಗಳು ಬಾಕಿ ಇರುವಾಗ ಪಾಕಿಸ್ತಾನ ತಂಡವು 4 ವಿಕೆಟ್‌ಗಳ ನಷ್ಟಕ್ಕೆ 167 ರನ್ ಗಳಿಸಿತ್ತು. ಈ ಹಂತದಲ್ಲಿ ನ್ಯೂಝಿಲ್ಯಾಂಡ್‌ ಗಿಂತ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ನ್ಯೂಝಿಲ್ಯಾಂಡ್ ತನ್ನ ಇನಿಂಗ್ಸ್‌ನ ಕೊನೆಯ 10 ಓವರ್‌ ಗಳಲ್ಲಿ 99 ರನ್ ಗಳಿಸಿತು. ಪಾಕಿಸ್ತಾನಕ್ಕೆ ಇದಕ್ಕೆ ಸಮನಾದ ಪೈಪೋಟಿ ನೀಡುವಲ್ಲಿ ವಿಫಲವಾಯಿತು.

ತಯ್ಯಬ್ ತಾಹಿರ್ 31 ಎಸೆತಗಳಲ್ಲಿ 33 ರನ್ ಗಳಿಸಿದರು. ಆದರೆ 39ನೇ ಓವರ್‌ನಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 218 ರನ್ ಗಳಿಸಿದ ಪಾಕಿಸ್ತಾನ ತಂಡ ಹೋರಾಟ ಮುಗಿಸಿತು.

ಚಾಂಪಿಯನ್ಸ್ ಟ್ರೋಫಿಯಲ್ಲಿನ ಕಳಪೆ ಪ್ರದರ್ಶನದ ನಂತರ ಹೊಸಬರೊಂದಿಗೆ ನ್ಯೂಝಿಲ್ಯಾಂಡ್‌ ಗೆ ಬಂದಿಳಿದಿದ್ದ ಪಾಕಿಸ್ತಾನ ತಂಡವು 5 ಪಂದ್ಯಗಳ ಟಿ-20 ಸರಣಿಯನ್ನು 1-4 ಅಂತರದಿಂದ ಕಳೆದುಕೊಂಡಿತು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ನ್ಯೂಝಿಲ್ಯಾಂಡ್ ಪರ ಆರಂಭಿಕ ಆಟಗಾರ ರಿಸ್ ಮರಿಯು ಹಾಗೂ ಮೈಕಲ್ ಬ್ರೆಸ್‌ವೆಲ್ ಅರ್ಧಶತಕಗಳನ್ನು ಗಳಿಸಿದರು. ಡ್ಯಾರಿಲ್ ಮಿಚೆಲ್ ಏಕದಿನ ಕ್ರಿಕೆಟ್‌ನಲ್ಲಿ 2,000 ರನ್ ಪೂರೈಸಿದರು.

ಮರಿಯು(58 ರನ್, 61 ಎಸೆತ) ತಾನಾಡಿದ 2ನೇ ಏಕದಿನ ಪಂದ್ಯದಲ್ಲಿ ತನ್ನ ಚೊಚ್ಚಲ ಅರ್ಧಶತಕ ಗಳಿಸಿದರು. ಈ ಪಂದ್ಯಕ್ಕಿಂತ ಮೊದಲು 1,998 ರನ್ ಗಳಿಸಿದ್ದ ಮಿಚೆಲ್(43 ರನ್, 53 ಎಸೆತ) 52 ಪಂದ್ಯಗಳಲ್ಲಿ 49.7ರ ಸರಾಸರಿಯಲ್ಲಿ 2,041 ರನ್ ಗಳಿಸಿದರು.

ನಾಯಕ ಬ್ರೆಸ್‌ ವೆಲ್ 40 ಎಸೆತಗಳಲ್ಲಿ 59 ರನ್ ಗಳಿಸಿ ನ್ಯೂಝಿಲ್ಯಾಂಡ್ ತಂಡವು 42 ಓವರ್‌ ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 264 ರನ್ ಗಳಿಸಲು ನೆರವಾದರು. ಅರ್ಹವಾಗಿಯೇ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದರು. ಸರಣಿಯಲ್ಲಿ ಒಟ್ಟು 10 ವಿಕೆಟ್‌ಗಳನ್ನು ಕಬಳಿಸಿದ ಸಿಯರ್ಸ್ ‘ಸರಣಿಶ್ರೇಷ್ಠ’ ಗೌರವಕ್ಕೆ ಪಾತ್ರರಾದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News