́ನಾನು ಅವಳನ್ನು ಕನಸಿನಲ್ಲಿ ನೋಡುತ್ತಿದ್ದೇನೆʼ ಎಂದು ಅತ್ತಿಗೆಯ ಸಮಾಧಿಯನ್ನೇ ಅಗೆದ ಯುವಕ!
ಭೋಪಾಲ್: ಮಧ್ಯಪ್ರದೇಶದ ಸಿಧಿಯಲ್ಲಿ ʼನಾನು ಅವಳನ್ನು ಕನಸಿನಲ್ಲಿ ನೋಡುತ್ತಿದ್ದೇನೆʼ ಎಂದು ಅತ್ತಿಗೆಯ ಸಮಾಧಿಯನ್ನೇ ಯುವಕನೋರ್ವ ಅಗೆದಿರುವ ಘಟನೆ ನಡೆದಿದೆ.
ಸೋಮವಾರ ಸಿಧಿಯ ಥಾನಹ್ವಾ ಟೋಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ಅರ್ಮಾನ್ ಖಾನ್(30) ಎಂಬಾತನನ್ನು ಬಂಧಿಸಿದ್ದಾರೆ.
ಆರೋಪಿಯ ಅಣ್ಣ ಅಮಾನತ್ ಖಾನ್ ಈ ಕುರಿತು ಸಹೋದರನ ವಿರುದ್ಧವೇ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನ.15ರಂದು ನನ್ನ ಪತ್ನಿ ಶಫಿರುನ್ನಿಶಾ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಮರುದಿನ ಅವರನ್ನು ಸಮಾಧಿ ಮಾಡಲಾಗಿದೆ. ಡಿ.23ರಂದು ಬೆಳಗ್ಗೆ ಸಮಾಧಿಯನ್ನು ಯಾರೋ ಅಗೆದಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ವೇಳೆ ಅರ್ಮಾನ್ ರಾತ್ರಿಯಲ್ಲಿ ಈ ಪ್ರದೇಶದಲ್ಲಿ ಸುತ್ತಾಡುತ್ತಿದ್ದ ಎಂದು ಕೆಲವರು ಹೇಳಿದ್ದಾರೆ. ಅನುಮಾನಗೊಂಡು ವಿಚಾರಣೆ ನಡೆಸಿದಾಗ ಅರ್ಮಾನ್ ಸಮಾಧಿಯನ್ನು ಅಗೆದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕೊತ್ವಾಲಿ ಪೊಲೀಸ್ ಠಾಣೆಯ ಪ್ರಭಾರಿ ಅಭಿಷೇಕ್ ಉಪಾಧ್ಯಾಯ ಈ ಕುರಿತು ಪ್ರತಿಕ್ರಿಯಿಸಿದ್ದು, ಸಮಾಧಿಯ ಒಂದು ಸ್ಲ್ಯಾಬ್ ಅನ್ನು ತೆಗೆದುಹಾಕಲಾಗಿದೆ ಎಂದು ದೂರು ಬಂದಾಗ ಮಾಟ ಮಂತ್ರದ ಕುರಿತು ಶಂಕೆ ವ್ಯಕ್ತವಾಗಿತ್ತು. ಆದರೆ, ದೂರುದಾರನ ಕಿರಿಯ ಸಹೋದರನನ್ನು ವಿಚಾರಣೆ ನಡೆಸಿದಾಗ ಆತ ಸಮಾಧಿಯನ್ನು ಅಗೆದಿರುವುದನ್ನು ಒಪ್ಪಿಕೊಂಡಿದ್ದಾನೆ. ʼನಾನು ಅವಳನ್ನು ಕನಸಿನಲ್ಲಿ ನೋಡುತ್ತಿದ್ದೇನೆʼ ಎಂದು ಹೇಳಿಕೊಂಡಿದ್ದಾನೆ. ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಆತನ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.