ರಶ್ಯಾ-ಉಕ್ರೇನ್ ಯುದ್ಧದಲ್ಲಿ ಮೃತಪಟ್ಟ ವ್ಯಕ್ತಿಯ ಮೃತದೇಹ 6 ತಿಂಗಳ ಬಳಿಕ ಮನೆಗೆ!
ಅಝಂಗಢ : ರಶ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಲ್ಲಿ ಸಾವನ್ನಪ್ಪಿದ ಉತ್ತರಪ್ರದೇಶದ ಬನಕಟಾ ಗ್ರಾಮದ ನಿವಾಸಿ ಕನ್ಹಯ್ಯ ಯಾದವ್ ಅವರ ಮೃತದೇಹ ಸುಮಾರು 6 ತಿಂಗಳ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರವಾಗಿದೆ.
ಕನ್ಹಯ್ಯ ಯಾದವ್ (41) ಕಳೆದ ವರ್ಷ ಜನವರಿಯಲ್ಲಿ ಬಾಣಸಿಗನ ಕೆಲಸಕ್ಕೆ ರಶ್ಯಾಕ್ಕೆ ತೆರಳಿದ್ದರು. ಅಲ್ಲಿ ಅವರನ್ನು ರಶ್ಯಾ ಸೇನೆಗೆ ಸೇರಿಸಲಾಗಿತ್ತು. ಅನಂತರ ರಶ್ಯಾ-ಉಕ್ರೇನ್ ಯುದ್ಧದಲ್ಲಿ ಮುಂಚೂಣಿಯಲ್ಲಿ ಹೋರಾಡಲು ಕಳುಹಿಸಲಾಗಿತ್ತು. ಯುದ್ಧದಲ್ಲಿ ಅವರು ಗಾಯಗೊಂಡಿದ್ದರು. ಅನಂತರ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಅವರು ಜೂನ್ 17ರಂದು ಮೃತಪಟ್ಟಿದ್ದರು.
ಏಜೆಂಟ್ ಮೂಲಕ ಕೆಲಸದ ವಿಸಾವನ್ನು ಪಡೆದುಕೊಂಡ ಬಳಿಕ ಯಾದವ್ ಜನವರಿ 16ರಂದು ರಶ್ಯದ ಸೈಂಟ್ ಪೀಟರ್ಸ್‌ಬರ್ಗ್‌ಗೆ ತೆರಳಿದ್ದರು. ಅವರು ಅಲ್ಲಿ ಬಾಣಸಿಗನಾಗಿ ತರಬೇತಿ ಪಡೆದಿದ್ದರು. ಬಳಿಕ ಅವರು ರಶ್ಯಾ ಸೇನೆಗೆ ಸೇರ್ಪಡೆಗೊಂಡಿದ್ದರು ಎಂದು ಯಾದವ್ ಪತ್ನಿ ಗೀತಾ ತಿಳಿಸಿದ್ದಾರೆ.
ಮೇ 9ರಂದು ಯಾದವ್ ಅವರು ತಮಗೆ ಹೋರಾಟದಲ್ಲಿ ಗಾಯಗಳಾಗಿವೆ ಎಂದು ಮಾಹಿತಿ ನೀಡಿದ್ದರು. ಅವರು ಮೇ 25ರ ವರೆಗೆ ನಮ್ಮೊಂದಿಗೆ ಸಂಪರ್ಕದಲ್ಲಿದ್ದರು. ಆದರೆ, ಅನಂತರ ಅವರೊಂದಿಗಿನ ಸಂಪರ್ಕ ಕಡಿತಗೊಂಡಿತ್ತು ಎಂದು ಅವರು ತಿಳಿಸಿದ್ದಾರೆ.
ಡಿಸೆಂಬರ್ 6ರಂದು ಮಾಸ್ಕೊದಲ್ಲಿರುವ ರಾಯಭಾರಿ ಕಚೇರಿ, ಯಾದವ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭ ಜೂನ್ 17ರಂದು ಮೃತಪಟ್ಟಿದ್ದಾರೆ ಎಂದು ಕುಟುಂಬಕ್ಕೆ ಮಾಹಿತಿ ನೀಡಿತ್ತು ಎಂದು ಅವರು ಹೇಳಿದ್ದಾರೆ.
ಯಾದವ್ ಅವರ ಪಾರ್ಥಿವ ಶರೀರವನ್ನು ಸೋಮವಾರ ತವರೂರಿಗೆ ತರಲಾಗಿದೆ. ಪಾರ್ಥಿವ ಶರೀರ ವಾರಣಾಸಿಯ ಬಾಬತ್‌ಪುರ ವಿಮಾನ ನಿಲ್ದಾಣಕ್ಕೆ ಬಂದಾಗ ಕುಟುಂಬದ ಸದಸ್ಯರೊಂದಿಗೆ ನೈಬ್ ತಹಶೀಲ್ದಾರ್ ಸಂಜಯ್ ರಾಯ್ ಸೇರಿದಂತೆ ಸ್ಥಳೀಯಾಡಳಿತದ ಅಧಿಕಾರಿಗಳು ಇದ್ದರು. ಅನಂತರ ಯಾದವ್ ಅವರ ಮೃತದೇಹವನ್ನು ಸ್ವಗ್ರಾಮಕ್ಕೆ ತರಲಾಯಿತು.