ಇದು ವಂಚನೆ, ಇಂತಹ ಯಾವುದೇ ಯೋಜನೆ ಪ್ರಾರಂಭವಾಗಿಲ್ಲ: ದಿಲ್ಲಿ ಸರಕಾರ ಘೋಷಿಸಿದ್ದ ಯೋಜನೆಗಳ ಕುರಿತು ಪ್ರಕಟನೆ ಹೊರಡಿಸಿದ ಅಧಿಕಾರಿಗಳು!
ಹೊಸದಿಲ್ಲಿ : ದಿಲ್ಲಿಯ ಎಎಪಿ ಸರಕಾರ ಘೋಷಿಸಿದ್ದ ಎರಡು ಯೋಜನೆಗಳಿಗೆ ನೋಂದಣಿ ಪ್ರಕ್ರಿಯೆಯ ಬಗ್ಗೆ ದಿಲ್ಲಿ ಸರ್ಕಾರಿ ಇಲಾಖೆಯ ಅಧಿಕಾರಿಗಳು ದಿಲ್ಲಿಯಲ್ಲಿ ಅಂತಹ ಯಾವುದೇ ಯೋಜನೆಗಳು ಪ್ರಾರಂಭವಾಗಿಲ್ಲ, ಇದು ವಂಚನೆ ಎಂದು ಪ್ರಕಟನೆ ಹೊರಡಿಸಿದ್ದು, ದಿಲ್ಲಿಯ ಚುನಾಯಿತ ಸರಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಿಯಂತ್ರಣದಲ್ಲಿರುವ ಅಧಿಕಾರಿಗಳ ನಡುವಿನ ಜಟಾಪಟಿ ಮತ್ತೆ ಮುನ್ನೆಲೆಗೆ ಬಂದಿದೆ.
ಸೋಮವಾರದಂದು, ಕೇಜ್ರಿವಾಲ್ ಅವರು ಅತಿಶಿ ಅವರೊಂದಿಗೆ ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆಯಡಿಯಲ್ಲಿ ತೆರಿಗೆ ಪಾವತಿಸದ ಮಹಿಳೆಯರಿಗೆ 2,100 ರೂಪಾಯಿಗಳನ್ನು ನೀಡುವ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸಂಜೀವನಿ ಯೋಜನೆಯಡಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವ ಯೋಜನೆಗೆ ನೋಂದಣಿಗೆ ಚಾಲನೆ ನೀಡಿದ್ದರು. ಇದು ಎಎಪಿ ಮತ್ತು ಬಿಜೆಪಿ ನಾಯಕರ ನಡುವೆ ಜಟಾಪಟಿಗೆ ಕಾರಣವಾಯಿತು. ಎರಡು ಯೋಜನೆಗಳು ಇನ್ನೂ ಅಂಗೀಕರಿಸದ ಕಾರಣ ಪಕ್ಷವು ಜನರನ್ನು ವಂಚಿಸುತ್ತಿದೆ ಎಂದು ವಿರೋಧ ಪಕ್ಷ ಬಿಜೆಪಿ ಆರೋಪಿಸಿತ್ತು.
ಇದರ ಬೆನ್ನಲ್ಲೇ ಪ್ರಕಟನೆ ಹೊರಡಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕರು, ಒಂದು ರಾಜಕೀಯ ಪಕ್ಷವು ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆ ಅಡಿಯಲ್ಲಿ ತಿಂಗಳಿಗೆ 2,100 ರೂ.ಗಳನ್ನು ವಿತರಿಸುವುದಾಗಿ ಹೇಳುತ್ತದೆ. ದಿಲ್ಲಿಯಲ್ಲಿ ಅಂತಹ ಯಾವುದೇ ಯೋಜನೆಗಳು ಪ್ರಾರಂಭವಾಗಿಲ್ಲ. ಅಂತಹ ಯೋಜನೆ ಪ್ರಾರಂಭವಾದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅರ್ಜಿಗಳನ್ನು ಸಲ್ಲಿಸಲು ಅರ್ಹ ಡಿಜಿಟಲ್ ಪೋರ್ಟಲ್ ಪ್ರಾರಂಭಿಸುತ್ತದೆ. ಯಾವುದೇ ಖಾಸಗಿ ವ್ಯಕ್ತಿ/ರಾಜಕೀಯ ಪಕ್ಷಗಳಿಗೆ ಅಂತಹ ಭೌತಿಕ ನಮೂನೆಗಳು/ಅರ್ಜಿಗಳ ಮೂಲಕ ಮಾಹಿತಿಯನ್ನು ಸಂಗ್ರಹಿಸುವುದು ವಂಚನೆಯಾಗಿದೆ ಎಂದು ತಿಳಿಸಿತ್ತು.
ಈ ಕುರಿತು ಎಎಪಿ ಪ್ರಧಾನ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅತಿಶಿ, ಇಂದು ಪತ್ರಿಕೆಗಳಲ್ಲಿ ಹೊರಡಿಸಲಾದ ನೋಟೀಸ್ ಸಂಪೂರ್ಣವಾಗಿ ಸುಳ್ಳು. ಸಾರ್ವಜನಿಕರ ಪ್ರತಿಕ್ರಿಯೆಯಿಂದ ಬೆಚ್ಚಿಬಿದ್ದಿರುವ ಬಿಜೆಪಿ ಈ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಸುಳ್ಳು ಸಾರ್ವಜನಿಕ ನೋಟಿಸ್ ನೀಡಿದೆ. ಈ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಆಡಳಿತಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.