ನನ್ನ ಕಾರ್ಯಕ್ರಮಗಳು ನಿಮ್ಮ ಪಟ್ಟಿಯಲ್ಲಿವೆಯೇ?: ಬುಕ್ ಮೈ ಶೋದಿಂದ ಸ್ಪಷ್ಟನೆ ಕೋರಿದ ಕುನಾಲ್ ಕಾಮ್ರಾ

ಕುನಾಲ್ ಕಾಮ್ರಾ | PC : X
ಮುಂಬೈ : ತಮ್ಮ ಕಾರ್ಯಕ್ರಮದ ತುಣುಕುಗಳನ್ನು ಕಿತ್ತುಹಾಕಿ ಅವರನ್ನು ಪಟ್ಟಿಯಿಂದ ಕೈಬಿಟ್ಟಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಕ್ರಮದ ಬಗ್ಗೆ ಆನ್ ಲೈನ್ ಟಿಕೆಟಿಂಗ್ ಪ್ಲಾಟ್ ಫಾರಂ ಬುಕ್ ಮೈಶೋದಿಂದ ಖ್ಯಾತ ಸ್ಟಾಂಡಪ್ ಕಮೇಡಿಯನ್ ಕುನಾಲ್ ಕಾಮ್ರಾ ಸ್ಪಷ್ಟನೆ ಕೋರಿದ್ದಾರೆ.
ಶಿವಸೇನೆ (ಶಿಂಧೆ ಬಣ)ದ ಯುವ ಮುಖಂಡರೊಬ್ಬರು ಕಾಮ್ರಾ ಅವರ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಬುಕ್ ಮೈ ಶೋ, ಈ ಕ್ರಮ ಕೈಗೊಂಡಿದೆ ಎಂದು ತಿಳಿದು ಬಂದಿದೆ.
ಕಾಮ್ರಾ ನಯಾ ಭಾರತ್ ಶೋದಲ್ಲಿ ಶಿವಸೇನೆಯ ಏಕನಾಥ್ ಶಿಂಧೆ ಅವರನ್ನು ವ್ಯಂಗ್ಯವಾಡಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು.
ಕುನಾಲ್ ಕಾಮ್ರಾ ಕಾರ್ಯಕ್ರಮದ ಟಿಕೆಟ್ ಗಳನ್ನು ಬುಕ್ ಮೈ ಶೋ ಮೂಲಕ ಮಾರಾಟ ಮಾಡದಂತೆ ಶಿವಸೇನೆ ಯುವ ಮುಖಂಡ ರಾಹುಲ್ ಎನ್.ಕನಾಲ್ ಪತ್ರ ಬರೆದಿದ್ದರು.
ಈ ಬಗ್ಗೆ ಬುಕ್ ಮೈಶೋ ಕ್ರಮ ಕೈಗೊಂಡಿದೆ ಎನ್ನಲಾದ ಬಗ್ಗೆ ಎಕ್ಸ್ ಪೋಸ್ಟ್‌ನಲ್ಲಿ ಸ್ಪಷ್ಟನೆ ಬಯಸಿರುವ ಕಾಮ್ರಾ, "ನಿಮ್ಮ ವೇದಿಕೆಯಲ್ಲಿ ನನ್ನ ಕಾರ್ಯಕ್ರಮಗಳನ್ನು ಪಟ್ಟಿ ಮಾಡಿದ್ದೀರಾ? ಎಂಬ ಬಗ್ಗೆ ಸ್ಪಷ್ಟನೆ ನೀಡಿ. ಇಲ್ಲದಿದ್ದರೆ ಒಳ್ಳೆಯದು; ನನಗೆ ಅರ್ಥವಾಗುತ್ತದೆ" ಎಂದು ಹೇಳಿದ್ದಾರೆ.
ಪಟ್ಟಿಯಿಂದ ಕಿತ್ತುಹಾಕಲಾಗಿದೆ ಎಂಬ ಬಗ್ಗೆ ದೃಢಪಡಿಸುವಂತೆ ಸ್ಪಷ್ಟನೆ ಕೇಳಿದ್ದೇನೆ ಎಂದು the wire ಜತೆ ಮಾತನಾಡಿದ ಕುನಾಲ್ ಕಾಮ್ರಾ ಹೇಳಿದ್ದಾರೆ. ಆದರೆ ಈ ಬಗ್ಗೆ ಬುಕ್ ಮೈ ಶೋ ಪ್ಲಾಟ್‍ಫಾರಂ ಈ ವರೆಗೆ ಯಾವುದೇ ಹೇಳಿಕೆ ನೀಡಿಲ್ಲ.
Hello @bookmyshow can you please confirm if I have your platform to list my shows if not it’s fine. I understand… https://t.co/JqjJtuWFE3
— Kunal Kamra (@kunalkamra88) April 5, 2025