ಸುಪ್ರೀಂ ಕೋರ್ಟ್ ಆದೇಶ ಪ್ರಶ್ನಿಸಿ ಅಮೆರಿಕದ ನ್ಯಾಯಾಲಯದಲ್ಲಿ ದಾವೆ : ಅನಿವಾಸಿ ಭಾರತೀಯ ಮಹಿಳೆಗೆ ನ್ಯಾಯಾಂಗ ನಿಂದನೆ ನೋಟಿಸ್

ಹೊಸದಿಲ್ಲಿ: ಮಾಜಿ ಪತಿಯ ಜತೆಗಿನ ವೈವಾಹಿಕ ವ್ಯಾಜ್ಯವನ್ನು ಇತ್ಯರ್ಥಪಡಿಸಿಕೊಳ್ಳುವುದಾಗಿ ಸುಪ್ರೀಂಕೋರ್ಟ್ ಎದುರು ಒಪ್ಪಿಕೊಂಡು ಬಳಿಕ, ಈ ವ್ಯಾಜ್ಯದ ಕಲಾಪಗಳನ್ನು ಸುಪ್ರೀಂಕೋರ್ಟ್ ನಡೆಸದಂತೆ ಆದೇಶಿಸಬೇಕು ಎಂದು ಕೋರಿ ಅಮೆರಿಕದ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ ಅನಿವಾಸಿ ಭಾರತೀಯ ಮಹಿಳೆಯ ವಿರುದ್ಧ ಏಕೆ ನ್ಯಾಯಾಲಯ ನಿಂದನೆ ಪ್ರಕ್ರಿಯೆ ಆರಂಭಿಸಬಾರದು ಎಂದು ಪ್ರಶ್ನಿಸಿ ನೋಟಿಸ್ ನೀಡಲಾಗಿದೆ.
ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಎ.ಜಿ.ಮಶಿಹ್ ಅವರನ್ನೊಳಗೊಂಡ ನ್ಯಾಯಪೀಠ ಈ ನೋಟಿಸ್ ಜಾರಿ ಮಾಡಿದ್ದು, ಸುಪ್ರೀಂಕೋರ್ಟ್ನ ವಿರುದ್ಧ ಅಮೆರಿಕದ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ ಎಂಬ ಅಂಶವನ್ನು ಮಾಜಿ ಪತಿ ಸುಪ್ರೀಂಕೋರ್ಟ್ ಗಮನಕ್ಕೆ ತಂದಿದ್ದು, ಮಹಿಳೆಯ ನಡವಳಿಕೆ ಬಗ್ಗೆ ಸುಪ್ರೀಂಕೋರ್ಟ್ ಕೆಂಗಣ್ಣು ಬೀರಿದೆ.
ಈ ಪ್ರಕರಣದಲ್ಲಿ ಪತಿ ಹಾಗೂ ಪತ್ನಿ ವೈವಾಹಿಕ ವ್ಯಾಜ್ಯವನ್ನು ಇತ್ಯರ್ಥಪಡಿಸಿಕೊಳ್ಳುವುದಾಗಿ ಸುಪ್ರೀಂಕೋರ್ಟ್ಗೆ ಭರವಸೆ ನೀಡಿದ್ದರು. ಪತ್ನಿ ಹಾಗೂ ಮಗನಿಗೆ ಒಂದು ಬಾರಿಯ ಪರಿಹಾರವಾಗಿ ಒಂದು ಕೋಟಿ ರೂಪಾಯಿಗಳನ್ನು ನೀಡಲು ಪತಿ ಒಪ್ಪಿಕೊಂಡಿದ್ದರು. ಆದರೆ ಅಮೆರಿಕಕ್ಕೆ ಮರಳಿದ ಬಳಿಕ ಹೆಚ್ಚಿನ ಪರಿಹಾರ ಆಗ್ರಹಿಸಿ ಮಹಿಳೆ ದಾವೆ ಹೂಡಿದ್ದಾರೆ.
ಈ ಹಿನ್ನೆಲೆಯಲ್ಲಿ ವಕೀಲ ಪ್ರಭಜೀತ್ ಜೌಹಾರ್ ಅವರ ಮೂಲಕ ಪತಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಅಮೆರಿಕದ ನ್ಯಾಯಾಲಯದಲ್ಲಿ ಹೂಡಿರುವ ದಾವೆಯ ಅರ್ಜಿಯನ್ನು ಪತ್ನಿ ವಾಪಾಸು ಪಡೆಯಲು ಆದೇಶಿಸಬೇಕು ಎಂದು ಕೋರಿದ್ದರು. ಆದಾಗ್ಯೂ ಮಹಿಳೆ ಅಮೆರಿಕದ ಕೋರ್ಟ್ನಲ್ಲಿ ಮತ್ತೊಂದು ಅರ್ಜಿ ಸಲ್ಲಿಸಿ ಸುಪ್ರೀಂಕೋರ್ಟ್ ಕಲಾಪ ಸ್ಥಗಿತಗೊಳಿಸುವಂತೆ ಇಂಜೆಕ್ಷಂನ್ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಸುಪ್ರೀಂಕೋರ್ಟ್ನಲ್ಲಿ ಒಪ್ಪಿಕೊಂಡಂತೆ ಪತಿ ಜೀವನಾಂಶ ನೀಡಲು ಒಪ್ಪಿಕೊಂಡಿದ್ದರೂ ಅದರ ಹೆಚ್ಚಳಕ್ಕೆ ಅಮೆರಿಕ ನ್ಯಾಯಾಲಯದಲ್ಲಿ ದಾವೆ ಹೂಡಿರುವ ಕ್ರಮ ಅವಹೇಳನಕಾರಿ ಸ್ವರೂಪದ್ದು ಎಂದು ಸುಪ್ರೀಂಕೋರ್ಟ್ ವಿಶ್ಲೇಷಿಸಿದೆ.