ಬಿಸಿಲಿನ ಬೇಗೆಗೆ ಉತ್ತರ ಭಾರತ ತತ್ತರ : 21 ನಗರಗಳಲ್ಲಿ 42 ಡಿಗ್ರಿ ಸೆಲ್ಸಿಯಸ್ ದಾಟಿದ ತಾಪಮಾನ

ಸಾಂದರ್ಭಿಕ ಚಿತ್ರ | PC : freepik.com
ಬೆಂಗಳೂರು : ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತ ಅಸಾಧ್ಯ ಸೆಖೆಯಿಂದ ತತ್ತರಿಸಿದ್ದು, ಐದು ರಾಜ್ಯಗಳ 21ಕ್ಕೂ ಹೆಚ್ಚು ನಗರಗಳಲ್ಲಿ 42 ಡಿಗ್ರಿ ಸೆಲ್ಸಿಯಸ್‍ಗಿಂತ ಹೆಚ್ಚು ತಾಪಮಾನ ದಾಖಲಾಗಿದೆ. ರಾಜಧಾನಿಯಲ್ಲಿ ಮುಂದಿನ ಮೂರು ದಿನಗಳ ಕಾಲ ಉಷ್ಣಗಾಳಿಯ ಮುನ್ನೆಚ್ಚರಿಕೆ ನೀಡಲಾಗಿದೆ. ದೆಹಲಿಯ ಜತೆಗೆ ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್ ಮತ್ತು ಒಡಿಶಾ ಕೂಡಾ ಅಧಿಕ ಉಷ್ಣಾಂಶ ದಾಖಲಿಸಿವೆ.
ಏಪ್ರಿಲ್ ಮೊದಲ ವಾರದಲ್ಲಿ ಈ ಭಾಗಗಳಲ್ಲಿ ತಾಪಮಾನ 3 ಡಿಗ್ರಿಯಿಂದ 6.9 ಡಿಗ್ರಿವರೆಗೆ ಹೆಚ್ಚಿದೆ. ಗಾಳಿಯ ವೇಗ ಕಡಿಮೆಯಾಗಿರುವುದು ಝಳ ಹೆಚ್ಚಳಕ್ಕೆ ಕಾರಣ ಎಂದು ಹವಾಮಾನ ಇಲಾಖೆ ವಿಶ್ಲೇಷಿಸಿದೆ.
ಮೇಲ್ಮೈ ಉಷ್ಣಾಂಶ ಬೆಳಿಗ್ಗೆ ಪ್ರತಿ ಗಂಟೆಗೆ 8-10 ಕಿಲೋಮೀಟರ್ ಇದೆ. ಆ ಬಳಿಕ ಗಾಳಿಯ ವೇಗ ನಿಧಾನವಾಗಿ ಕಡಿಮೆಯಾಗಿ ಸಂಜೆ ಮತ್ತು ರಾತ್ರಿ ಆಗ್ನೇಯಾಭಿಮುಖವಾಗಿ ಗಂಟೆಗೆ 8 ಕಿಲೋಮೀಟರ್ ಗಿಂತಲೂ ಕಡಿಮೆ ವೇಗದಲ್ಲಿ ಬೀಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ರಾಜಸ್ಥಾನದ ಬರ್ಮೆರ್ ತಾಪಮಾನದಲ್ಲಿ ಹೊಸ ದಾಖಲೆ ನಿರ್ಮಾಣಾಗಿದೆ. ಭಾನುವಾರ ಇಲ್ಲಿ 45.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಏಪ್ರಿಲ್ ಮೊದಲ ವಾರದಲ್ಲಿ ದಾಖಲಾದ ಗರಿಷ್ಠ ತಾಪಮಾನವಾಗಿದೆ. ಇಲ್ಲಿ ದಾಖಲಾಗಿರುವ ಉಷ್ಣಾಂಶ ವಾಡಿಕೆ ತಾಪಮಾನಕ್ಕಿಂತ 6.8 ಡಿಗ್ರಿಯಷ್ಟು ಅಧಿಕ.
ಏಪ್ರಿಲ್ 10ರವರೆಗೆ ಗುಜರಾತ್‍ನ ಕೆಲ ಭಾಗಗಳಲ್ಲಿ ಉಷ್ಣಗಾಳಿ ಬೀಸುವ ಸಾಧ್ಯತೆ ಇದ್ದು, ಇದರ ಪ್ರಮಾಣ ಸೌರಾಷ್ಟ್ರ ಮತ್ತು ಕಚ್ ಪ್ರದೇಶಗಳಲ್ಲಿ ವ್ಯಾಪಕವಾಗಲಿದೆ ಎಂದು ಅಂದಾಜಿಸಲಾಗಿದೆ. ರಾಜಸ್ಥಾನ, ಹಿಮಾಚಲ ಪ್ರದೇಶ, ಹರ್ಯಾಣ, ಛತ್ತೀಸ್‍ಗಢ, ಪಂಜಾಬ್, ಮಧ್ಯಪ್ರದೇಶ ಮತ್ತು ಪಶ್ಚಿಮ ಉತ್ತರ ಪ್ರದೇಶಗಳ ಕೆಲ ಭಾಗಗಳಲ್ಲಿ ಇದೇ ವಾತಾವರಣ ಮುಂದುವರಿಯಲಿದೆ ಎಂದು ಇಲಾಖೆ ಹೇಳಿದೆ.