ಸಂಸತ್ ಭವನದ ಸಮೀಪ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

Update: 2024-12-25 15:35 GMT

PC : PTI 

ಹೊಸದಿಲ್ಲಿ : ನೂತನ ಸಂಸತ್ ಭವನದ ಕಟ್ಟಡದ ಸಮೀಪ ವ್ಯಕ್ತಿಯೊಬ್ಬರು ಬುಧವಾರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ದಿಲ್ಲಿ ಅಗ್ನಿ ಶಾಮಕ ಸೇವೆ (ಡಿಎಫ್‌ಎಸ್)ಯ ಅಧಿಕಾರಿ ತಿಳಿಸಿದ್ದಾರೆ.

ಹೊಸದಿಲ್ಲಿಯಲ್ಲಿರುವ ಸಂಸತ್ ಭವನದ ಮುಂಭಾಗದಲ್ಲಿರುವ ರೈಲ್ವೇ ಭವನದ ಸಮೀಪ ಈ ಘಟನೆ ನಡೆದಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ಸೇವೆಯ ಸಿಬ್ಬಂದಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಿದ್ದಾರೆ.

‘‘ಸಂಸತ್ ಭವನದ ಮುಂಭಾಗದಲ್ಲಿರುವ ರೈಲ್ವೆ ಭವನದ ಸಮೀಪ ನಡೆದ ಈ ಘಟನೆ ಕುರಿತಂತೆ ನಾವು ಅಪರಾಹ್ನ 3.35ಕ್ಕೆ ಕರೆ ಸ್ವೀಕರಿಸಿದೆವು. ಕೂಡಲೇ ಅಗ್ನಿ ಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಿದೆವು’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಸತ್ ಭವನದ ಸಮೀಪ ಇದ್ದ ಭದ್ರತಾ ಸಿಬ್ಬಂದಿ ಕೂಡಲೇ ಮಧ್ಯೆ ಪ್ರವೇಶಿಸಿದರು ಹಾಗೂ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಿದರು ಎಂದು ಅವರು ಹೇಳಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಉತ್ತರಪ್ರದೇಶದ ಬಾಗಪತ್ ನಿವಾಸಿ ಜಿತೇಂದ್ರ ಎಂದು ಗುರುತಿಸಲಾಗಿದೆ. 30ರಿಂದ 35 ವಯಸ್ಸಿನ ಈತ ಸಂಸತ್ ಭವನದ ಮುಂಭಾಗದಲ್ಲಿರುವ ಪಾರ್ಕ್‌ನಲ್ಲಿ ಬೆಂಕಿ ಹಚ್ಚಿಕೊಂಡ. ಅನಂತರ ಮುಖ್ಯ ಗೇಟಿನತ್ತ ಧಾವಿಸಿದ ಎಂದು ಹೊಸದಿಲ್ಲಿ ಡಿಸಿಪಿ ದೇವೇಶ್ ಮಾಹ್ಲಾ ತಿಳಿಸಿದ್ದಾರೆ.

‘‘ಬಾಗಪತ್‌ನಲ್ಲಿ ಈತನ ವಿರುದ್ಧ 2021ರಲ್ಲಿ ಪ್ರಕರಣವೊಂದು ದಾಖಲಾದ ಹಿನ್ನೆಲೆಯಲ್ಲಿ ತೊಂದರೆಗೆ ಒಳಗಾಗಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಸುಸೈಡ್ ನೋಟ್ ಪತ್ತೆಯಾಗಿಲ್ಲ. ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’’ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News