ಬಿಜೆಪಿಗೆ 2,244 ಕೋಟಿ, ಕಾಂಗ್ರೆಸ್ ಗೆ 289 ಕೋಟಿ ರೂ. ದೇಣಿಗೆ: ವರದಿ

Update: 2024-12-26 05:38 GMT

ಸಾಂದರ್ಭಿಕ ಚಿತ್ರ | PTI

ಹೊಸದಿಲ್ಲಿ: ಕಳೆದ ಹಣಕಾಸು ವರ್ಷದಲ್ಲಿ ಭಾರತೀಯ ಜನತಾ ಪಕ್ಷ, ವ್ಯಕ್ತಿಗಳು, ಟ್ರಸ್ಟ್ ಗಳು ಮತ್ತು ಕಾರ್ಪೊರೇಟ್ ಕಂಪನಿಗಳಿಂದ 20 ಸಾವಿರಕ್ಕಿಂತ ಅಧಿಕ ಮೊತ್ತದ ಒಟ್ಟು 2,244 ಕೋಟಿ ರೂಪಾಯಿ ದೇಣಿಗೆಯನ್ನು ಪಡೆದಿದ್ದು, ಇದು 2022-23ರಲ್ಲಿ ಪಡೆದ ದೇಣಿಗೆಯ ಮೂರು ಪಟ್ಟು ಅಧಿಕ. ಕಾಂಗ್ರೆಸ್ ಪಕ್ಷ ಈ ರೀತಿಯ 288.9 ಕೋಟಿ ರೂಪಾಯಿಗಳನ್ನು ಪಡೆದಿದ್ದು, 2022-23ರಲ್ಲಿ ಈ ಪ್ರಮಾಣ 79.9 ಕೋಟಿ ರೂಪಾಯಿ ಆಗಿತ್ತು.

ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ದೇಣಿಗೆಯ ವರದಿ ಪ್ರಕಾರ, ಬಿಜೆಪಿ 2023-24ನೇ ಹಣಕಾಸು ವರ್ಷದಲ್ಲಿ ಪ್ರುಡೆಂಟ್ ಎಲೆಕ್ಟೊರಲ್ ಟ್ರಸ್ಟ್‌ನಿಂದ 723.6 ಕೋಟಿ ರೂಪಾಯಿ ದೇಣಿಗೆ ಪಡೆದಿದೆ. ಈ ಟ್ರಸ್ಟ್ ಕಾಂಗ್ರೆಸ್ ಪಕ್ಷಕ್ಕೆ 156.4 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಅಂದರೆ ಬಿಜೆಪಿ ಪಡೆದ ಒಟ್ಟು ದೇಣಿಗೆಯ ಮೂರನೇ ಒಂದರಷ್ಟು ಭಾಗ ಮತ್ತು ಕಾಂಗ್ರೆಸ್ ದೇಣಿಗೆಯ ಅರ್ಧದಷ್ಟು ಭಾಗ ಈ ಟ್ರಸ್ಟ್‌ನಿಂದ ಬಂದಿದೆ. ಈ ಟ್ರಸ್ಟ್‌ಗೆ ದೇಣಿಗೆ ನೀಡಿದ ಅಗ್ರಗಣ್ಯ ಕಂಪನಿಗಳ ಪೈಕಿ ಮೆಘಾ ಎಂಜಿನಿಯರಿಂಗ್ ಅಂಡ್ ಇನ್ಫ್ರಾ ಲಿಮಿಟೆಡ್, ಸೆರಮ್ ಇನ್ಸ್ಟಿಟ್ಯೂಟ್, ಆರ್ಸೆಲರ್ ಮಿತ್ತಲ್ ಗ್ರೂಪ್ ಮತ್ತು ಭಾರ್ತಿ ಏರ್‌ಟೆಲ್ ಸೇರಿವೆ.

ಬಿಜೆಪಿ ಹಾಗೂ ಕಾಂಗ್ರೆಸ್ ಘೋಷಿಸಿರುವ ಒಟ್ಟು ದೇಣಿಗೆಗಳಲ್ಲಿ ಎಲೆಕ್ಟೊರಲ್ ಬಾಂಡ್ ಮೂಲಕ ಪಡೆದ ಹಣ ಸೇರಿಲ್ಲ. ನಿಯಮಾನುಸಾರ ಈ ರಾಜಕೀಯ ಪಕ್ಷಗಳು ತಮ್ಮ ವಾರ್ಷಿಕ ಪರಿಶೋಧಿತ ವರದಿಗಳಲ್ಲಿ ಮಾತ್ರ ಇದನ್ನು ಉಲ್ಲೇಖಿಸಬೇಕಾಗುತ್ತದೆ. ದೇಣಿಗೆ ವರದಿಗಳಲ್ಲಿ ಇವುಗಳನ್ನು ಉಲ್ಲೇಖಿಸುವಂತಿಲ್ಲ. 2024ರ ಫೆಬ್ರವರಿಯಲ್ಲಿ ಚುನಾವಣಾ ಬಾಂಡ್ ಯೋಜನೆಯನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದ್ದು, ರಾಜಕೀಯ ಪಕ್ಷಗಳು ದೇಣಿಗೆಯನ್ನು ನೇರವಾಗಿ ಅಥವಾ ಚುನಾವಣಾ ಟ್ರಸ್ಟ್ ಮಾರ್ಗದಲ್ಲಿ ಸ್ವೀಕರಿಸಬೇಕು ಎಂದು ಸೂಚಿಸಿತ್ತು.

ಆದರೆ ಕೆಲ ಪ್ರಾದೇಶಿಕ ಪಕ್ಷಗಳು ಚುನಾವಣಾ ಬಾಂಡ್ ಮೂಲಕ ಪಡೆದ ದೇಣಿಗೆಯನ್ನು ಸ್ವಯಂಪ್ರೇರಿತವಾಗಿ ಪ್ರಕಟಿಸಿವೆ. ಇವುಗಳಲ್ಲಿ ಬಿಆರ್‌ಎಸ್ ಚುನಾವಣಾ ಬಾಂಡ್ ಮೂಲಕ 495.5 ಕೋಟಿ, ಡಿಎಂಕೆ 60 ಕೋಟಿ ಹಾಗೂ ವೈಎಸ್ಆರ್ ಕಾಂಗ್ರೆಸ್ 125.5 ಕೋಟಿ ರೂಪಾಯಿ ದೇಣಿಗೆ ಪಡೆದಿವೆ. ಜೆಎಂಎಂ ಚುನಾವಣಾ ಬಾಂಡ್ ಮೂಲಕ 11.5 ಕೋಟಿ ರೂಪಾಯಿ ಪಡೆದಿದ್ದು, ಇತರ ದೇಣಿಗೆಗಳಾಗಿ 64 ಲಕ್ಷ ರೂಪಾಯಿ ಗಳಿಸಿದೆ. ಬಿಜೆಪಿ ಪಡೆದ ದೇಣಿಗೆ ಶೇಕಡ 212ರಷ್ಟು ಏರಿಕೆಯಾಗಿದೆ.

Full View

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News