ಗುಜರಾತ್ | ಇಸ್ಕಾನ್ ದೇವಾಲಯದ ವ್ಯಕ್ತಿಗಳಿಂದ ಪುತ್ರಿಯ ಅಕ್ರಮ ಸೆರೆ ; ತಂದೆಯಿಂದ ಹೇಬಿಯಸ್ ಕಾರ್ಪಸ್ ಅರ್ಜಿ
ಅಹಮದಾಬಾದ್ : ಅಹಮದಾಬಾದ್ ನ ಇಸ್ಕಾನ್ ದೇವಾಲಯದಲ್ಲಿ ವಾಸಿಸುತ್ತಿರುವ ಕೆಲವರು ತನ್ನ ಪುತ್ರಿಯನ್ನು ಅಕ್ರಮವಾಗಿ ಸೆರೆಯಿರಿಸಿಕೊಂಡಿದ್ದಾರೆ ಎಂದು ಆರೋಪಿಸಿ ತಂದೆಯೊಬ್ಬರು ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಪರಿಗಣಿಸಿದ ಗುಜರಾತ್ ಹೈಕೋರ್ಟ್, ಮಂಗಳವಾರ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಜುಲೈ 10ರಂದು ತಂದೆ ನೀಡಿರುವ ಪೊಲೀಸ್ ದೂರಿನಲ್ಲಿ ಮಾಡಲಾಗಿರುವ ಆರೋಪಗಳನ್ನು ನ್ಯಾ. ಸಂಗೀತಾ ಕೆ.ವಿಶೆನ್ ಹಾಗೂ ನ್ಯಾ. ಸಂಜೀವ್ ಜೆ. ಠಾಕರ್ ಅವರನ್ನೊಳಗೊಂಡ ನ್ಯಾಯಪೀಠ ಗಂಭೀರವಾಗಿ ಪರಿಗಣಿಸಿತು.
ನಂತರ, “ಆರೋಪಗಳನ್ನು ಪರಿಗಣನೆಗೆ ತೆಗೆದುಕೊಂಡು, ಸಂಬಂಧಿತ ಪೊಲೀಸ್ ಠಾಣೆಯ ಮೂಲಕ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ. ಈ ನೋಟಿಸ್ ಜನವರಿ 9, 2025ರೊಳಗೆ ನ್ಯಾಯಾಲಯಕ್ಕೆ ವಾಪಸು ಬರಬೇಕು” ಎಂದು ತನ್ನ ಆದೇಶದಲ್ಲಿ ನ್ಯಾಯಾಲಯ ಹೇಳಿದೆ.
ನನ್ನ ಪುತ್ರಿ ಜೂನ್ 27ರಂದು 23 ತೊಲೆ ಚಿನ್ನಾಭರಣಗಳು ಹಾಗೂ 3,62,000 ರೂ. ನಗದಿನೊಂದಿಗೆ ಮನೆ ತೊರೆದಿದ್ದಳು. ನಮ್ಮ ಕುಟುಂಬವು ನಮ್ಮ ಪುತ್ರಿಯ ಬಗ್ಗೆ ನೆರೆಹೊರೆಯವರನ್ನು ವಿಚಾರಿಸಿದರೂ, ಅವರಿಂದ ಯಾವುದೇ ಸಮಾಧಾನಕರ ಉತ್ತರ ದೊರೆತಿರಲಿಲ್ಲ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. ನಂತರ, ನಾಲ್ಕನೆ ಪ್ರತಿವಾದಿಯು ಇನ್ನಿತರ ಏಳು ಮಂದಿ ಖಾಸಗಿ ಪ್ರತಿವಾದಿಗಳ ಸಂಪರ್ಕಕ್ಕೆ ಬಂದು, ಅವರ ನೆರವಿನೊಂದಿಗೆ ನನ್ನ ಪುತ್ರಿಯನ್ನು ಕರೆದೊಯ್ದಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿತು ಎಂದು ಅರ್ಜಿದಾರರು ಆಪಾದಿಸಿದ್ದಾರೆ.
ಐದಾರು ತಿಂಗಳುಗಳೇ ಕಳೆದರೂ, ನಾನು ನನ್ನ ಪುತ್ರಿಯ ಜೀವದ ಬಗ್ಗೆ ಯಾವುದೇ ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ ಹಾಗೂ ನನ್ನ ಪುತ್ರಿಯನ್ನು ಪತ್ತೆ ಹಚ್ಚಲು ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದೂ ಅರ್ಜಿದಾರರು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ, ನನ್ನ ಪುತ್ರಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಅವರು ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ.
ಮುಂದಿನ ವಿಚಾರಣೆಯನ್ನು ಜನವರಿ 9, 2025ಕ್ಕೆ ಮುಂದೂಡಲಾಗಿದೆ.