ಭಾರತದ ಆರ್ಥಿಕ ಸುಧಾರಣೆಗಳ ಹರಿಕಾರ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನ
ಹೊಸದಿಲ್ಲಿ: ಭಾರತ ಕಂಡ ಶ್ರೇಷ್ಠ ಅರ್ಥ ಶಾಸ್ತ್ರಜ್ಞರಲ್ಲಿ ಒಬ್ಬರು ಹಾಗೂ ಒಂದು ದಶಕದ ಕಾಲ ದೇಶದ ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್ ಗುರುವಾರ ರಾತ್ರಿ ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. 2004 ರಿಂದ 2014 ರವರೆಗೆ ಅವರು ದೇಶದ ಪ್ರಧಾನಿಯಾಗಿದ್ದರು.
ಗುರುವಾರ ಸಂಜೆ ಅವರ ಆರೋಗ್ಯ ಹದಗೆಟ್ಟಿದ್ದರಿಂದ, ಅವರನ್ನು ದಿಲ್ಲಿಯ ಏಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
ಮನಮೋಹನ್ ಸಿಂಗ್ ನಿಧನದ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಏಮ್ಸ್, ಸಿಂಗ್ ಅವರು ವಯೋ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಅವರು ಮನೆಯಲ್ಲಿ ಗುರುವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಪ್ರಜ್ಞೆ ಕಳೆದುಕೊಂಡರು ಎಂದು ತಿಳಿಸಿದೆ.
‘‘ತೀವ್ರ ದುಃಖದೊಂದಿಗೆ, ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ತಿಳಿಸುತ್ತಿದ್ದೇವೆ. ವಯೋ ಸಂಬಂಧಿ ಕಾಯಿಲೆಗಳಿಗೆ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಅವರು ಮನೆಯಲ್ಲಿ ಗುರುವಾರ ಪ್ರಜ್ಞೆ ಕಳೆದುಕೊಂಡರು. ಅಲ್ಲಿ ಕೂಡಲೇ ಚಿಕಿತ್ಸೆಯನ್ನು ಆರಂಭಿಸಲಾಗಿತ್ತು. ರಾತ್ರಿ 8.06 ಗಂಟೆಗೆ ಅವರನ್ನು ಹೊಸದಿಲ್ಲಿಯಲ್ಲಿರುವ ಏಮ್ಸ್‌ನ ವೈದ್ಯಕೀಯ ತುರ್ತು ಘಟಕಕ್ಕೆ ತರಲಾಯಿತು. ಎಲ್ಲಾ ಪ್ರಯತ್ನದ ಹೊರತಾಗಿಯೂ ಅವರನ್ನು ಉಳಿಸಿಲು ಸಾಧ್ಯವಾಗಲಿಲ್ಲ. ರಾತ್ರಿ 9.51ಕ್ಕೆ ಅವರು ನಿಧನರಾಗಿರುವುದಾಗಿ ಘೋಷಿಸಲಾಯಿತು’’ ಎಂದು ಏಮ್ಸ್‌ನ ಹೇಳಿಕೆ ತಿಳಿಸಿದೆ.
ಮನಮೋಹನ್ ಸಿಂಗ್ 1991 ರಲ್ಲಿ ರಾಜ್ಯಸಭೆಗೆ ಪ್ರವೇಶ ಮಾಡುವ ತಮ್ಮ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದರು. ಅವರು 1991ರಿಂದ 1996ರವರೆಗೆ ನರಸಿಂಹ ರಾವ್ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದರು. ಬಳಿಕ 2004 ರಿಂದ 2014ರವರೆಗೆ ದೇಶದ ಪ್ರಧಾನಿಯಾಗಿದ್ದರು.
2024ರ ಎಪ್ರಿಲ್ನಲ್ಲಿ ಅವರ ರಾಜ್ಯಸಭೆ ಅಧಿಕಾರವಧಿ ಅಂತ್ಯವಾಗಿದೆ. ಈ ಮೂಲಕ ಅವರು ಸಂಸತ್ತಿನ ಮೇಲ್ಮನೆಯಲ್ಲಿ 33 ವರ್ಷಗಳ ಕಾಲ ಇದ್ದರು.
ಮನಮೋಹನಸಿಂಗ್ ಅವರು 1932ರ ಸೆಪ್ಟೆಂಬರ್ 26ರಂದು ಅವಿಭಜಿತ ಭಾರತದ ಪಂಜಾಬ್ ಪ್ರಾಂತ್ಯದಲ್ಲಿ ಜನಿಸಿದರು.
ಡಾ. ಸಿಂಗ್ ಅವರು ಮೆಟ್ರಿಕ್ಯುಲೇಷನ್ ಪರೀಕ್ಷೆಯನ್ನು 1948ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿದರು. ಅವರ ಶೈಕ್ಷಣಿಕ ಸಾಧನೆ ಅವರನ್ನು ಪಂಜಾಬ್ ನಿಂದ ಇಂಗ್ಲೆಂಡ್ ನ ಕೇಂಬ್ರಿಜ್ ವಿಶ್ವವಿದ್ಯಾಲಯಕ್ಕೆ ಕರೆದೊಯ್ಯಿತು. ಅಲ್ಲಿ ಅವರು 1957ರಲ್ಲಿ ಪ್ರಥಮ ದರ್ಜೆಯೊಂದಿಗೆ ಅರ್ಥಶಾಸ್ತ್ರದಲ್ಲಿ ಆನರ್ಸ್ ಪದವಿ ಪಡೆದರು. ನಂತರ ಅವರು 1962ರಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ನಫ್ ಫೀಲ್ಡ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಡಿ.ಫಿಲ್ ಗೌರವ ಪಡೆದರು.