ಇಂಡಿಯಾ ಮೈತ್ರಿಕೂಟದಿಂದ ಕಾಂಗ್ರೆಸ್ ಅನ್ನು ಉಚ್ಚಾಟಿಸಲು ಮುಂದಾದ ಆಪ್; ಇತರ ಪಕ್ಷಗಳೊಂದಿಗೆ ಸಮಾಲೋಚನೆ: ವರದಿ

Update: 2024-12-26 08:29 GMT

Photo : PTI

ಹೊಸದಿಲ್ಲಿ: 2013ರಲ್ಲಿ 40 ದಿನಗಳ ಕೇಜ್ರಿವಾಲ್ ಸರಕಾರಕ್ಕೆ ಬೆಂಬಲ ನೀಡಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಕಾಂಗ್ರೆಸ್ ಪಕ್ಷ ದುರ್ಬಲಗೊಳ್ಳಲು ಪ್ರಮುಖ ಕಾರಣ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಜಯ್ ಮಾಕೆನ್ ವಾಗ್ದಾಳಿ ನಡೆಸಿದ ಬೆನ್ನಿಗೇ, ಇಂಡಿಯಾ ಮೈತ್ರಿಕೂಟದಿಂದ ಕಾಂಗ್ರೆಸ್ ಪಕ್ಷವನ್ನು ಹೊರ ಹಾಕಲು ಇತರ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಗುರುವಾರ ಕುಪಿತ ಆಪ್ ನಾಯಕರೊಬ್ಬರು ಹೇಳಿಕೆ ನೀಡುವ ಮೂಲಕ, ಇಂಡಿಯಾ ಮೈತ್ರಿಕೂಟದಲ್ಲಿನ ಭಿನ್ನಾಭಿಪ್ರಾಯಗಳು ಬಿಕ್ಕಟ್ಟಿನ ಸ್ವರೂಪಕ್ಕೆ ತಿರುಗಿವೆ.

ಚುನಾವಣಾ ರಾಜ್ಯವಾದ ದಿಲ್ಲಿಯಲ್ಲಿ ಮಾಕೆನ್ ಹಾಗೂ ಇನ್ನಿತರ ಕಾಂಗ್ರೆಸ್ ನಾಯಕರು ನೀಡಿರುವ ಹೇಳಿಕೆಗಳಿಂದ ನಮ್ಮ ನಾಯಕರು ಅಸಮಾಧಾನಗೊಂಡಿದ್ದಾರೆ ಎಂದು ಆಪ್ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. ಈ ಚುನಾವಣೆಯಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸುತ್ತಿವೆ. ದಿಲ್ಲಿ ವಿಧಾನಸಭಾ ಚುನಾವಣೆ ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಯುವ ಸಾಧ್ಯತೆ ಇದೆ.

ತಮ್ಮ ಪಕ್ಷದ ಯೋಜನೆಗಳನ್ನು ಹಂಚಿಕೊಳ್ಳಲು ಇಂದು ಮಧ್ಯಾಹ್ನ 1 ಗಂಟೆಗೆ ದಿಲ್ಲಿ ಮುಖ್ಯಮಂತ್ರಿ ಅತಿಶಿ ಹಾಗೂ ಆಪ್ ನ ಹಿರಿಯ ನಾಯಕ ಸಂಜಯ್ ಸಿಂಗ್ ಸುದ್ದಿಗೋಷ್ಠಿಯನ್ನು ಹಮ್ಮಿಕೊಂಡಿದ್ದಾರೆ. ಮಹಾತ್ಮ ಗಾಂಧಿಯು ಕಾಂಗ್ರೆಸ್ ಅಧ್ಯಕ್ಷತೆ ವಹಿಸಿದ್ದ ಶತಮಾನೋತ್ಸವವನ್ನು ಆಚರಿಸಲು ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಆಯೋಜನೆಗೊಂಡಿರುವ ದಿನವನ್ನೇ ಆಪ್ ನಾಯಕರು ತಮ್ಮ ಆಕ್ರೋಶವನ್ನು ಹೊರಹಾಕಲು ಆಯ್ದುಕೊಂಡಿದ್ದಾರೆ.

ಹರ್ಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರಾಭವಗೊಂಡ ನಂತರ, ಕಾಂಗ್ರೆಸ್ ನಾಯಕತ್ವದ ವಿರುದ್ಧ ವಾಗ್ದಾಳಿ ನಡೆಸಿದ್ದ ತೃಣಮೂಲ ಕಾಂಗ್ರೆಸ್ ಹಾದಿಯನ್ನೇ ಆಪ್ ಕೂಡಾ ಹಿಡಿದಿದೆ. ಇಂಡಿಯಾ ಮೈತ್ರಿಕೂಟದ ನಾಯಕತ್ವವನ್ನು ಕಾಂಗ್ರೆಸ್ ನಿಂದ ಹಿಂಪಡೆದು, ಮಮತಾ ಬ್ಯಾನರ್ಜಿ ಅವರಿಗೆ ನೀಡಬೇಕು ಎಂಬ ಬೇಡಿಕೆಯನ್ನು ತೃಣಮೂಲ ಕಾಂಗ್ರೆಸ್ ನಾಯಕರು ಇಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News