ಕೆಲವರು ತೆಲುಗು ನಟನ ಘನತೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ : ಅಲ್ಲು ಅರ್ಜುನ್ ಗೆ ಬೆಂಬಲಕ್ಕೆ ನಿಂತ ಕೇಂದ್ರ ಸಚಿವ ಅನುರಾಗ್ ಠಾಕೂರ್
ಹೈದರಾಬಾದ್ : ಬಿಜೆಪಿ ಸಂಸದ ಅನುರಾಗ್ ಠಾಕೂರ್ ಬುಧವಾರ 'ಪುಷ್ಪ 2' ಚಿತ್ರದ ನಟ ಅಲ್ಲು ಅರ್ಜುನ್ ಅವರ ಬೆಂಬಲಕ್ಕೆ ನಿಂತಿದ್ದು, ಕೆಲವರು ಅಲ್ಲು ಅರ್ಜುನ್ ಅವರ ಘನತೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅನುರಾಗ್ ಠಾಕೂರ್, ನೀವು ಚಲನಚಿತ್ರೋದ್ಯಮದಲ್ಲಿ ತೆಲುಗು ನಟರ ಕೊಡುಗೆಯನ್ನು ನೋಡಿದರೆ, ಅವರು ಚಲನಚಿತ್ರ ಮತ್ತು ಭಾರತೀಯ ಚಿತ್ರರಂಗವನ್ನು ಜಾಗತಿಕ ನಕ್ಷೆಯಲ್ಲಿ ಇರಿಸಿರುವುದನ್ನು ನೋಡಬಹುದು. ಆದರೆ ಕೆಲವರು ಅವರ ಘನತೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
'ಪುಷ್ಪ 2: ದಿ ರೂಲ್' ಚಿತ್ರದ ಪ್ರೀಮಿಯರ್ ಶೋ ವೇಳೆ ಹೈದರಾಬಾದ್ ನ ಥಿಯೇಟರ್ ನಲ್ಲಿ ಕಾಲ್ತುಳಿತದ ನಂತರ ಅಲ್ಲು ಅರ್ಜುನ್ ವಿರುದ್ಧ ತೆಲಂಗಾಣ ಪೊಲೀಸರು ಕ್ರಮವನ್ನು ಕೈಗೊಂಡಿದ್ದರು. ಇದರ ಬೆನ್ನಲ್ಲೇ ಬಿಜೆಪಿ ನಾಯಕ ಅಲ್ಲು ಅರ್ಜುನ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ʼಕಳೆದ ಕೆಲವು ವರ್ಷಗಳಿಂದ ನರೇಂದ್ರ ಮೋದಿ ಸರ್ಕಾರದಲ್ಲಿ ಅಲ್ಲು ಅರ್ಜುನ್ ಗೆ ರಾಷ್ಟ್ರ ಪ್ರಶಸ್ತಿ, ಚಿರಂಜೀವಿಗೆ ಜೀವಮಾನ ಸಾಧನೆ ಪ್ರಶಸ್ತಿ ಸಿಕ್ಕಿದೆ, ಅವರ ಕೊಡುಗೆಯನ್ನು ಇಡೀ ದೇಶ ಮತ್ತು ವಿಶ್ವವೇ ಮೆಚ್ಚಿಕೊಂಡಿದೆ. ಇನ್ನೊಂದೆಡೆ 'ಆರ್ ಆರ್ ಆರ್', 'ಪುಷ್ಪ', 'ಕೆಜಿಎಫ್', 'ಬಾಹುಬಲಿ' ಇವೆಲ್ಲವೂ ಭಾರತೀಯ ಚಿತ್ರರಂಗಕ್ಕೆ ಖ್ಯಾತಿ ತಂದುಕೊಟ್ಟಿವೆ. ವಿವಾದಗಳನ್ನು ಸೃಷ್ಟಿಸುವ ಬದಲು ಸಂವಾದ ನಡೆಸಲು ಪ್ರಯತ್ನಿಸಬೇಕು, ಸುರಕ್ಷತೆಯನ್ನು ನೋಡಿಕೊಳ್ಳಿ ಮತ್ತು ರಾಜಕೀಯ ಮಾಡಬೇಡಿ ಎಂದು ಹೇಳಿದ್ದಾರೆ.