ಸುನಾಮಿಗೆ 20 ವರ್ಷ | ಹಾವುಗಳಿರುವ ಕಾಡಿನಲ್ಲಿ ನನ್ನ ಪುತ್ರ ‘ಸುನಾಮಿ’ಗೆ ಜನ್ಮ ನೀಡಿದ್ದೆ ಎಂದು ಸ್ಮರಿಸಿದ ಮಹಿಳೆ!
ಪೋರ್ಟ್ ಬ್ಲೇರ್ : ದಕ್ಷಿಣ ಭಾರತದ ಕಡಲ ತೀರಕ್ಕೆ ಸುನಾಮಿ ಅಪ್ಪಳಿಸಿ ಇಂದಿಗೆ 20 ವರ್ಷ ಪೂರೈಸಿದೆ. 2004ರಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕ್ಕೆ ಈ ಬೆಚ್ಚಿಬೀಳಿಸುವ ಸುನಾಮಿ ಅಪ್ಪಳಿಸಿದಾಗ, ನಮಿತಾ ರಾಯ್ ಎಂಬ ಮಹಿಳೆ ಹಟ್ ಬೇಯಲ್ಲಿದ್ದ ತನ್ನ ಗುಡಿಸಲು ಕೊಚ್ಚಿಕೊಂಡು ಹೋಗಿದ್ದರಿಂದ, ಗತ್ಯಂತರವಿಲ್ಲದೆ ತನ್ನ ಕುಟುಂಬದೊಂದಿಗೆ ಹಾವುಗಳಿರುವ ಕಾಡಿನಲ್ಲಿ ವಾಸ್ತವ್ಯ ಹೂಡಿದ್ದರು. ಆಗ ಕೇವಲ 26 ವರ್ಷದವರಾಗಿದ್ದ ಅವರು ಅಲ್ಲಿಯೇ ತಮ್ಮ ಪುತ್ರನಿಗೆ ಜನ್ಮವನ್ನೂ ನೀಡಿದ್ದರು. ಸುನಾಮಿಯ ಭೀಕರತೆಯನ್ನು ನೆನಪಿಟ್ಟುಕೊಳ್ಳಲು ಅವರು ತಮ್ಮ ಪುತ್ರನಿಗೆ ‘ಸುನಾಮಿ’ ಎಂದೇ ಹೆಸರನ್ನೂ ಇಟ್ಟರು!
ಸುನಾಮಿ ಸಂಭವಿಸಿದ ಇಪ್ಪತ್ತು ವರ್ಷಗಳ ನಂತರ, ಅಂದಿನ ಘಟನೆಯನ್ನು ನಮಿತಾ ರಾಯ್ ಕಂಪಿಸುವ ಧ್ವನಿಯಲ್ಲಿ ನೆನಪಿಸಿಕೊಳ್ಳುತ್ತಾರೆ. “ಆ ಕರಾಳ ದಿನವನ್ನು ನೆನಪಿಸಿಕೊಳ್ಳಲು ನಾನು ಬಯಸುವುದಿಲ್ಲ. ನಾನಾಗ ಗರ್ಭಿಣಿಯಾಗಿದ್ದೆ ಹಾಗೂ ದೈನಂದಿನ ಜಂಜಡಗಳಲ್ಲಿ ಮುಳುಗಿ ಹೋಗಿದ್ದೆ. ದಿಢೀರನೆ, ನಾನೊಂದು ವಿಲಕ್ಷಣವನ್ನು ಮೌನವನ್ನು ಗಮನಿಸಿದೆ. ಸಮುದ್ರದ ಅಲೆಗಳು ತೀರದಿಂದ ಮೈಲುಗಟ್ಟಲೆ ದೂರ ಉಕ್ಕೇರಿ ಬರುತ್ತಿರುವುದನ್ನು ಕಂಡು ಆಘಾತಕ್ಕೊಳಗಾದೆ. ಪಕ್ಷಿಗಳು ಕರ್ಕಶವಾಗಿ ಸದ್ದು ಮಾಡುವುದೂ ನಮ್ಮ ಗಮನಕ್ಕೆ ಬಂದಿತು” ಎಂದು ಅವರು ಸ್ಮರಿಸುತ್ತಾರೆ.
“ಕೆಲವೇ ಕ್ಷಣಗಳಲ್ಲಿ ಭಯಾನಕ ಸದ್ದೊಂದು ಆರ್ಭಟಿಸುತ್ತಾ ಬರುತ್ತಿರುವುದು ಹಾಗೂ ದ್ವೀಪದ ತೀರದಲ್ಲಿದ್ದ ಗುಡಿಸಲಿನೆಡೆಗೆ ಬೃಹತ್ ಸಮುದ್ರದಲೆ ಧಾವಿಸಿ ಬರುತ್ತಿರುವುದನ್ನು ಕಂಡೆವು. ಇದರ ಬೆನ್ನಿಗೇ ಭೂಕಂಪನವೂ ಸಂಭವಿಸಿತು. ಆಗ ಜನರು ಕಿರುಚುತ್ತಾ, ಗುಡ್ಡುಗಾಡುಗಳ ಕಡೆಗೆ ಓಡುತ್ತಿರುವುದನ್ನು ನಾನು ಕಂಡೆ. ಅದನ್ನು ಕಂಡು ನನಗೆ ಆಘಾತವಾಯಿತು ಹಾಗೂ ನಾನು ಮೂರ್ಛೆ ಹೋದೆ” ಎಂದು ಅವರು ಮೆಲುಕು ಹಾಕುತ್ತಾರೆ.
“ಕೆಲ ಗಂಟೆಗಳ ನಂತರ, ನಾನೂ ಸೇರಿದಂತೆ ಸಾವಿರಾರು ಮಂದಿ ಸ್ಥಳೀಯರು ಗುಡ್ಡಗಾಡಿನ ಕಾಡೊಂದರಲ್ಲಿ ಇರುವುದನ್ನು ಕಂಡೆ. ನನ್ನ ಪತಿ ಮತ್ತು ನನ್ನ ಹಿರಿಯ ಪುತ್ರನನ್ನು ಕಂಡ ನಂತರ ನಾನು ನಿರಾಳವಾದೆ. ನಮ್ಮ ದ್ವೀಪದ ಬಹುತೇಕ ಭಾಗಗಳು ದೈತ್ಯ ಅಲೆಗಳ ನಡುವೆ ಕೊಚ್ಚಿ ಹೋಗಿದ್ದವು. ಬಹುತೇಕ ಎಲ್ಲ ಆಸ್ತಿಪಾಸ್ತಿಗಳಿಗೂ ಹಾನಿಯಾಗಿತ್ತು” ಎಂದು ತಮ್ಮ ಹನಿಗೂಡಿದ ಕಣ್ಣುಗಳನ್ನು ಒರೆಸಿಕೊಳ್ಳುತ್ತಾ ನಮಿತಾ ರಾಯ್ ನೆನಪಿಸಿಕೊಳ್ಳುತ್ತಾರೆ.
“ರಾತ್ರಿ 11.49ರ ವೇಳೆಗೆ ನನಗೆ ಪ್ರಸವ ವೇದನೆ ಕಾಣಿಸಿಕೊಂಡಿತು. ಆದರೆ, ಸಮೀಪದಲ್ಲಿ ಯಾರೂ ವೈದ್ಯರಿರಲಿಲ್ಲ. ನಾನು ಬಂಡೆಯೊಂದರ ಮೇಲೆ ಮಲಗಿ ಅಳತೊಡಗಿದೆ. ನನ್ನ ಪತಿ ತಮ್ಮೆಲ್ಲ ಪ್ರಯತ್ನಗಳನ್ನು ಮಾಡಿದರೂ, ಯಾವುದೇ ವೈದ್ಯಕೀಯ ನೆರವು ಲಭಿಸಲಿಲ್ಲ. ಆಗ ಆದೇ ಕಾಡಿನಲ್ಲಿ ಆಶ್ರಯ ಪಡೆದಿದ್ದ ಕೆಲವು ಮಹಿಳೆಯರ ನೆರವು ಕೋರಿದರು. ಅವರ ನೆರವಿನಿಂದ ನಾನು ತೀರಾ ಸವಾಲಿನ ಪರಿಸ್ಥಿತಿಯ ನಡುವೆ ನನ್ನ ಪುತ್ರ ಸುನಾಮಿಗೆ ಜನ್ಮ ನೀಡಿದೆ. ಆ ಕಾಡಿನ ತುಂಬಾ ಹಾವುಗಳಿದ್ದವು” ಎಂದು ಅವರು ಹೇಳುತ್ತಾರೆ.
“ಅಲ್ಲಿ ಯಾವುದೇ ಆಹಾರವಿರಲಿಲ್ಲ ಹಾಗೂ ಸಮುದ್ರದ ಭೀತಿಯಿಂದ ನನಗೆ ಕಾಡಿನಿಂದ ಹೊರಗೆ ಬರುವ ಧೈರ್ಯವಿರಲಿಲ್ಲ. ಇದೇ ವೇಳೆ, ಅಧಿಕ ರಕ್ತಸ್ರಾವದಿಂದ ನನ್ನ ಆರೋಗ್ಯ ವಿಷಮಿಸತೊಡಗಿತ್ತು. ಹೀಗಿದ್ದೂ, ನನ್ನ ಪುತ್ರ ಅವಧಿಗೂ ಮುನ್ನ ಜನಿಸಿದ್ದುದರಿಂದ, ನನ್ನ ನವಜಾತ ಶಿಶುವಿಗೆ ಹಾಲುಣಿಸಿ, ಅವನನ್ನು ಜೀವಂತವಾಗುಳಿಸಿಕೊಳ್ಳುವಲ್ಲಿ ಯಶಸ್ವಿಯಾದೆ. ಉಳಿದ ಸಂತ್ರಸ್ತರು ಎಳನೀರು ಕುಡಿದು ಬದುಕಿದರು. ನಾವು ಹಟ್ ಬೇನಲ್ಲಿರುವ ಲಾಲ್ ಟಿಕ್ರಿ ಬೆಟ್ಟದಲ್ಲಿನ ನಾಲ್ಕು ರಾತ್ರಿಗಳನ್ನು ಕಳೆದೆವು. ನಂತರ, ನಮ್ಮನ್ನು ರಕ್ಷಣಾ ಸಿಬ್ಬಂದಿಗಳು ರಕ್ಷಿಸಿದರು. ನಮ್ಮನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಡಗಿನಲ್ಲಿ ಪೋರ್ಟ್ ಬ್ಲೇರ್ ನಲ್ಲಿರುವ ಜಿ.ಬಿ.ಪಂತ್ ಆಸ್ಪತ್ರೆಗೆ ಕರೆದೊಯ್ಯಲಾಯಿತು” ಎಂದು ಅವರು ಸ್ಮರಿಸುತ್ತಾರೆ.
ಹಟ್ ಬೇ, ಪೋರ್ಟ್ ಬ್ಲೇರ್ ನಿಂದ ಸುಮಾರು 117 ಕಿಮೀ ದೂರವಿದ್ದು, ಹಡಗಿನಲ್ಲಿ ಪ್ರಯಾಣಿಸಲು ಸುಮಾರು 8 ಗಂಟೆ ತಗುಲುತ್ತದೆ.
ನಮಿತಾ ರಾಯ್ ಅವರ ಹಿರಿಯ ಪುತ್ರ ಶಿಪ್ಪಿಂಗ್ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರೆ, ಅವರ ಕಿರಿಯ ಪುತ್ರ ಸುನಾಮಿ, ಅಂಡಮಾನ್ ಮತ್ತು ನಿಕೋಬಾರ್ ಆಡಳಿತಕ್ಕೆ ಛಾಯಾಗ್ರಾಹಕನಾಗಿ ಸೇವೆ ಸಲ್ಲಿಸಲು ಬಯಸುತ್ತಿದ್ದಾರೆ.
“ನನ್ನ ತಾಯಿಯೇ ನನಗೆಲ್ಲ. ನನ್ನ ತಂದೆ ತೀರಿ ಹೋದ ನಂತರ, ನಾನು ಕಂಡ ಅತ್ಯಂತ ಬಲಿಷ್ಠ ವ್ಯಕ್ತಿ ನನ್ನ ತಾಯಿಯಾಗಿದ್ದು, ನಮ್ಮನ್ನು ಸಲಹಲು ತುಂಬಾ ಕಷ್ಟಪಟ್ಟಳು. ಆಹಾರ ಸರಬರಾಜು ಸೇವೆಯೊಂದನ್ನು ನಡೆಸಿದ ಆಕೆ, ಅದಕ್ಕೆ ಹೆಮ್ಮೆಯಿಂದ ‘ಸುನಾಮಿ ಅಡುಗೆ ಮನೆ’ ಎಂದೇ ಹೆಸರಿಟ್ಟಳು. ನಾನು ಛಾಯಾಗ್ರಾಹಕನಾಗಲು ಬಯಸುತ್ತೇನೆ” ಎಂದು ಸುನಾಮಿ ರಾಯ್ ಹೇಳುತ್ತಾರೆ.
ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ತಮ್ಮ ಪತಿ ಲಕ್ಷ್ಮಿನಾರಾಯಣ್ ಮೃತಪಟ್ಟ ನಂತರ, ನಮಿತಾ ರಾಯ್ ತಮ್ಮ ಪುತ್ರರಾದ ಸೌರಭ್ ಹಾಗೂ ಸುನಾಮಿಯೊಂದಿಗೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ವಾಸಿಸುತ್ತಿದ್ದಾರೆ.
2004ರಲ್ಲಿ ಪರಿಣಾಮಕಾರಿ ಮುನ್ನೆಚ್ಚರಿಕೆ ವ್ಯವಸ್ಥೆ ಇಲ್ಲದೆ ಇದ್ದುದರಿಂದ, ಭಾರಿ ಪ್ರಮಾಣದ ನಷ್ಟ ಹಾಗೂ ಜೀವಹಾನಿ ಸಂಭವಿಸಿತ್ತು ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.
“ಸದ್ಯ ವಿಶ್ವಾದಾದ್ಯಂತ 1,400 ಮುನ್ನೆಚ್ಚರಿಕಾ ಕೇಂದ್ರಗಳಿದ್ದು, ನಾವು ಅಂತಹ ಪರಿಸ್ಥಿತಿಯನ್ನು ಎದುರಿಸಲು ಸರ್ವಸನ್ನದ್ಧವಾಗಿದ್ದೇವೆ” ಎಂದು ಹೇಳುತ್ತಾರೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಆಡಳಿತದ ಹಿರಿಯ ಅಧಿಕಾರಿಯೊಬ್ಬರು.