ಇಂದೋರ್‌ | ಅಕ್ರಮ ಗೋಶಾಲೆ ತೆರವು ಸಂದರ್ಭದಲ್ಲಿ ಬಜರಂಗಿಗಳು-ಮನಪಾ ಸಿಬ್ಬಂದಿಗಳ ನಡುವೆ ಘರ್ಷಣೆ

Update: 2024-12-25 15:39 GMT

ಸಾಂದರ್ಭಿಕ ಚಿತ್ರ | PC : PTI

ಇಂದೋರ್‌ : ಇಲ್ಲಿಯ ದತ್ತನಗರದಲ್ಲಿಯ ಅಕ್ರಮ ಗೋಶಾಲೆಯನ್ನು ಬುಧವಾರ ತೆರವುಗೊಳಿಸುವ ಸಂದರ್ಭ ಬಜರಂಗಿಗಳು ಮಹಾನಗರ ಪಾಲಿಕೆ ಸಿಬ್ಬಂದಿಗಳೊಂದಿಗೆ ಘರ್ಷಣೆಗಿಳಿದಿದ್ದರು ಎಂದು ಪಿಟಿಐ ಸುದ್ದಿಸಂಸ್ಥೆಯು ವರದಿ ಮಾಡಿದೆ. ಹಿಂಸಾಚಾರದಲ್ಲಿ ಕೆಲವು ಸರಕಾರಿ ವಾಹನಗಳು ಹಾನಿಗೀಡಾಗಿವೆ.

ಗೋಶಾಲೆಯನ್ನು ತೆರವುಗೊಳಿಸುವುದನ್ನು ವಿರೋಧಿಸಿ ಬಜರಂಗ ದಳ ಕಾರ್ಯಕರ್ತರು ಪ್ರತಿಭಟನೆಗಿಳಿದಿದ್ದರು. ಘರ್ಷಣೆಯಲ್ಲಿ ಭಾಗಿಯಾಗಿದ್ದ ಯಾವುದೇ ಗುಂಪಿನಿಂದ ಈವರೆಗೆ ದೂರು ದಾಖಲಾಗಿಲ್ಲ ಎಂದು ಡಿಸಿಪಿ ವಿನೋದ್ ಕುಮಾರ್ ಮೀನಾ ತಿಳಿಸಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರಗೊಂಡಿರುವ ಘಟನೆಯ ವೀಡಿಯೊಗಳು ಬಜರಂಗ ದಳದ ಕಾರ್ಯಕರ್ತರು ಸರಕಾರಿ ನೌಕರರ ಜೊತೆ ತೀವ್ರ ವಾಗ್ವಾದಕ್ಕಿಳಿದಿದ್ದನ್ನು ಮತ್ತು ಬಜರಂಗಿಗಳು ಜಾನುವಾರು ಸಾಗಣೆಗೆ ಬಳಸಿದ್ದ ಟ್ರಕ್‌ನ ಕಿಟಕಿ ಗಾಜನ್ನು ದೊಣ್ಣೆಯಿಂದ ಒಡೆದಿದ್ದನ್ನು ತೋರಿಸಿವೆ.

ಗೋಶಾಲೆಯನ್ನು ಸೂಕ್ತ ಅನುಮತಿ ಪಡೆಯದೆ ನಿರ್ಮಿಸಲಾಗಿತ್ತು. ಪ್ರದೇಶದ ನಿವಾಸಿಗಳಿಂದ ದೂರುಗಳ ಬಳಿಕ ಅದನ್ನು ತೆರವುಗೊಳಿಸಲಾಗುತ್ತಿತ್ತು ಎಂದು ಇಂದೋರ್‌ ಮಹಾನಗರ ಪಾಲಿಕೆಯ ಉಪ ಆಯುಕ್ತೆ ಲತಾ ಅಗರವಾಲ್ ಸುದ್ದಿಸಂಸ್ಥೆಗೆ ತಿಳಿಸಿದರು.

ಇಬ್ಬರು ಅಥವಾ ಮೂವರು ಮನಪಾ ಸಿಬ್ಬಂದಿಗಳನ್ನು ಥಳಿಸಲಾಗಿದ್ದು, ಹಲವಾರು ಸರಕಾರಿ ವಾಹನಗಳಿಗೆ ಹಾನಿಯನ್ನುಂಟು ಮಾಡಲಾಗಿದೆ. ಮನಪಾ ಆಯುಕ್ತರ ನಿರ್ದೇಶನಗಳ ಮೇರೆಗೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದರು.

ಗೋಶಾಲೆಯು ಸುಮಾರು 30 ವರ್ಷಗಳ ಹಿಂದೆಯೇ ನಿರ್ಮಾಣಗೊಂಡಿತ್ತು. ದತ್ತನಗರದಿಂದ ಸರಕಾರಿ ಗೋಶಾಲೆಗೆ ದನಗಳನ್ನು ಸಾಗಿಸುವಾಗ ಒಂದೇ ವಾಹನದಲ್ಲಿ 20ರಿಂದ 25 ಜಾನುವಾರುಗಳನ್ನು ತುಂಬಿಸಲಾಗಿತ್ತು. ಪರಿಣಾಮವಾಗಿ ಐದು ದನಗಳು ಗಾಯಗೊಂಡಿವೆ ಎಂದು ಸ್ಥಳೀಯ ಬಜರಂಗ ದಳ ಸಂಚಾಲಕ ಪ್ರವೀಣ ದಾರೆಕರ್ ಆರೋಪಿಸಿದರು.

ಈ ಘಟನೆಯಿಂದ ಹಿಂದು ಸಮುದಾಯದ ಜನರು ಕೆರಳಿದ್ದರು ಮತ್ತು ಅವರು ಪ್ರತಿಭಟಿಸಿದಾಗ ಮನಪಾ ಸಿಬ್ಬಂದಿಗಳು ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂದ ಅವರು, ‘ನಮ್ಮ ಯಾವುದೇ ಕಾರ್ಯಕರ್ತರ ವಿರುದ್ಧ ಪೋಲಿಸ್ ಪ್ರಕರಣವನ್ನು ದಾಖಲಿಸಿದರೆ ನಾವೂ ಮನಪಾ ಸಿಬ್ಬಂದಿಗಳ ವಿರುದ್ಧ ಪ್ರಕರಣವನ್ನು ದಾಖಲಿಸುತ್ತೇವೆ’ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News