ಕೇರಳ | ʼದತ್ತಾಂಶ ಸೋರಿಕೆʼ ಕುರಿತು ವರದಿ ಮಾಡಿದ ಪತ್ರಕರ್ತನಿಗೆ ಮೊಬೈಲ್ ಫೋನ್ ಹಸ್ತಾಂತರಿಸುವಂತೆ ಪೊಲೀಸರಿಂದ ಸೂಚನೆ
ತಿರುವನಂತಪುರಂ: ಕೇರಳ ರಾಜ್ಯ ಲೋಕಸೇವಾ ಆಯೋಗ(PSC) ದತ್ತಾಂಶ ಸೋರಿಕೆ ಕುರಿತು ವರದಿ ಮಾಡಿದ್ದ ಮಲಯಾಳಂ ದೈನಿಕ ʼಮಾಧ್ಯಮಂʼ ಪತ್ರಿಕೆಯ ವರದಿಗಾರನಿಗೆ ಮೊಬೈಲ್ ಫೋನ್ ಅನ್ನು ಹಾಜರುಪಡಿಸುವಂತೆ ಪೊಲೀಸರು ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಕೇರಳ ಲೋಕಸೇವಾ ಆಯೋಗದ ಕಾರ್ಯದರ್ಶಿ ಸಾಜು ಜಾರ್ಜ್ ಅವರ ದೂರಿನ ಮೇರೆಗೆ ಅಪರಾದ ವಿಭಾಗದ ಪೊಲೀಸರು ಈ ದಾಖಲೆಯನ್ನು ಹೇಗೆ ಪಡೆಯಲಾಗಿದೆ ಎಂಬುದರ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ.
ಈ ಕುರಿತು ʼಮಾಧ್ಯಮಂʼ ಪತ್ರಿಕೆಯ ಸಂಪಾದಕರಿಗೆ ಮತ್ತು ವರದಿಗಾರ ಅನಿರು ಅಶೋಕನ್ ಅವರಿಗೆ ಡಿಸೆಂಬರ್ 19ರಂದು BNSS ಸೆಕ್ಷನ್ 94ರ ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ಡಿಸೆಂಬರ್ 21ರಂದು ಅಶೋಕನ್ ಅವರಿಗೆ ಮತ್ತೊಂದು ನೋಟಿಸ್ ನೀಡಲಾಗಿದೆ, ಎರಡು ದಿನಗಳಲ್ಲಿ ತನಿಖಾಧಿಕಾರಿಯ ಮುಂದೆ ತಮ್ಮ ಮೊಬೈಲ್ ಫೋನ್ ಅನ್ನು ಹಾಜರುಪಡಿಸುವಂತೆ ನೋಟಿಸ್ ನಲ್ಲಿ ಸೂಚನೆಯನ್ನು ನೀಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮಾಧ್ಯಮಂ ಪತ್ರಿಕೆಯ ಮುಖ್ಯ ಸಂಪಾದಕರಾದ ಒ ಅಬ್ದುರಹಿಮಾನ್, ರಾಜ್ಯ ಲೋಕಸೇವಾ ಆಯೋಗದ (ಪಿಎಸ್ಸಿ) ದತ್ತಾಂಶ ಸೋರಿಕೆ ಆರೋಪದ ಕುರಿತು ʼಮಾಧ್ಯಮಂʼ ಮತ್ತು ತಿರುವನಂತಪುರಂ ಬ್ಯೂರೋದ ವರದಿಗಾರ ಅನಿರು ಅಶೋಕನ್ ಅವರ ವಿರುದ್ಧ ಪೊಲೀಸ್ ಕ್ರಮವು ಮಾಧ್ಯಮ ಸ್ವಾತಂತ್ರ್ಯದ ಉಲ್ಲಂಘನೆಯಲ್ಲದೆ. ಪತ್ರಿಕೆಯು ಕಾನೂನುಬದ್ಧವಾಗಿ ಇದನ್ನು ಎದುರಿಸಲಿದೆ ಎಂದು ಹೇಳಿದ್ದಾರೆ.
ಪೊಲೀಸರ ಕ್ರಮವನ್ನು ಖಂಡಿಸಿ ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟವು ಮಂಗಳವಾರ ಪೊಲೀಸ್ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದೆ.