ರಾಜಸ್ಥಾನ | 700 ಅಡಿ ಆಳದ ಬೋರ್ ವೆಲ್ ಗೆ ಬಿದ್ದ 3 ವರ್ಷದ ಬಾಲಕಿ: ಮುಂದುವರಿದ ರಕ್ಷಣಾ ಕಾರ್ಯಾಚರಣೆ
ಜೈಪುರ: ರಾಜಸ್ಥಾನದ ಕೊಟ್ ಪುಟ್ಲಿ ಬೆಹ್ರೋರ್ ಜಿಲ್ಲೆಯಲ್ಲಿ 700 ಅಡಿ ಆಳದ ಬೋರ್ ವೆಲ್ ಗೆ ಮೂರು ವರ್ಷದ ಬಾಲಕಿ ಬಿದ್ದಿದ್ದು, ಆಕೆಯನ್ನು ರಕ್ಷಿಸಲು ಸತತ 40 ಗಂಟೆಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿವೆ.
ಜಮೀನಿನಲ್ಲಿ ಆಟವಾಡುತ್ತಿದ್ದ ವೇಳೆ ಬಾಲಕಿ ಚೇತನಾ ಬೋರ್ ವೆಲ್ ಗೆ ಬಿದ್ದಿದ್ದಾಳೆ ಎಂದು ವರದಿಯಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ(ಎಸ್ ಡಿಆರ್ ಎಫ್), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್ ಡಿಆರ್ ಎಫ್) ಮತ್ತು ಇತರ ಅಧಿಕಾರಿಗಳ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಆದರೆ, ಬೋರ್ ವೆಲ್ ಸುತ್ತಲಿನ ಮಣ್ಣು ತೇವಾಂಶದಿಂದ ಕೂಡಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಂದರೆ ಎದುರಾಗಿದೆ ಎಂದು ಹೇಳಿದ್ದಾರೆ.
ನಾವು ಪೈಲಿಂಗ್ ಯಂತ್ರದಿಂದ 160 ಅಡಿ ಆಳದವರೆಗೆ ಅಗೆಯುತ್ತೇವೆ. ನಾವು ಎರಡು ರೀತಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಬೋರ್ವೆಲ್ ಬಳಿ ಜೆಸಿಬಿ ಮೂಲಕ 10 ಅಡಿ ಆಳದ ಹೊಂಡವನ್ನು ಅಗೆಯಲಾಗುತ್ತಿದೆ. ಇನ್ನೊಂದು ಕಡೆ ಪೈಲಿಂಗ್ ಯಂತ್ರದ ಸಹಾಯದಿಂದ ಅಗೆಯಲು ಆರಂಭಿಸಿದ್ದೇವೆ. ಈ ಯಂತ್ರದ ಮೂಲಕ 150 ಅಡಿಗಳಷ್ಟು ಆಳಕ್ಕೆ ಅಗೆಯಲು ಸಾಧ್ಯವಾಗುತ್ತದೆ ಎಂದು ಎನ್ ಡಿಆರ್ ಎಫ್ ಉಸ್ತುವಾರಿ ಯೋಗೇಶ್ ಮೀನಾ ತಿಳಿಸಿದ್ದಾರೆ.
ಬಾಲಕಿಗೆ ಆಮ್ಲಜನಕ ಪೂರೈಸಲು ಆಕ್ಸಿಜನ್ ಪೈಪ್ ಅನ್ನು ಬೋರ್ ವೆಲ್ ಗೆ ಇಳಿಸಲಾಗಿದೆ. ನಾಲ್ಕು ಆಂಬ್ಯುಲೆನ್ಸ್ ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಅಧಿಕಾರಿಗಳ ಪ್ರಕಾರ, ಸೋಮವಾರ ಮಧ್ಯಾಹ್ನ ಬಾಲಕಿ ಸುಮಾರು 15 ಅಡಿ ಆಳದ ಬೋರ್ ವೆಲ್ ಗೆ ಬಿದ್ದಿದ್ದಾಳೆ. ಆಕೆಯ ಕುಟುಂಬಸ್ಥರು ಆಕೆಯನ್ನು ಹೊರತೆಗೆಯಲು ಯತ್ನಿಸಿದಾಗ ಆಕೆ ಮತ್ತಷ್ಟು ಕೆಳಗೆ ಜಾರಿದ್ದಾಳೆ. ಬಳಿಕ ಜೈಪುರದಿಂದ ಎಸ್ ಡಿಆರ್ ಎಫ್ ಮತ್ತು ಎನ್ ಡಿಆರ್ ಎಫ್ ತಂಡಗಳನ್ನು ಕರೆಸಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.