ಮುಂಬೈಯ ಬಿಕೆಸಿ ಮೆಟ್ರೋ ನಿಲ್ದಾಣದ ನೆಲ ಅಂತಸ್ತಿನಲ್ಲಿ ಅಗ್ನಿ ಅವಘಡ

Update: 2024-11-15 16:11 GMT

PC : youtube.com

ಮುಂಬೈ : ಮುಂಬೈಯ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ)ನ ಮೆಟ್ರೋ ನಿಲ್ದಾಣದ ನೆಲ ಅಂತಸ್ತಿನಲ್ಲಿ ಶುಕ್ರವಾರ ಅಪರಾಹ್ನ ಅಗ್ನಿ ಅವಘಡ ಸಂಭವಿಸಿದೆ.

ಈ ಅಗ್ನಿ ಅವಘಡದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಿನ ರೈಲು ಸೇವೆಗಳನ್ನು 2 ಗಂಟೆಗೂ ಅಧಿಕ ಕಾಲ ರದ್ದುಗೊಳಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿರ್ಮಾಣ ಹಂತದಲ್ಲಿರುವ ನಿಲ್ದಾಣದ ಕಾರ್ಯಾಚರಿಸದ ಎ4 ಆಗಮನ/ನಿರ್ಗಮನದಲ್ಲಿ ಅಪರಾಹ್ನ 1.10ಕ್ಕೆ ಬೆಂಕಿ ಕಾಣಿಸಿಕೊಂಡಿತು. ಆದರೆ, ಯಾರಿಗೂ ಗಾಯಗಳಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ನಿಲ್ದಾಣದ 40ರಿಂದ 50 ಅಡಿ ಆಳದಲ್ಲಿದ್ದ ಮರದ ಹಾಳೆಗಳು, ಪೀಠೋಪಕರಣಗಳು ಹಾಗೂ ನಿರ್ಮಾಣ ಸಾಮಾಗ್ರಿಗಳು ಮಾತ್ರ ಬೆಂಕಿಗಾಹುತಿಯಾಯಿತು. ಇದರಿಂದಾಗಿ ನಿಲ್ದಾಣದ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿತು ಅಧಿಕಾರಿಗಳು ತಿಳಿಸಿದ್ದಾರೆ.

ಕೂಡಲೇ 8 ಅಗ್ನಿ ಶಾಮಕ ದಳದ ವಾಹನಗಳು ಸ್ಥಳಕ್ಕೆ ಆಗಮಿಸಿದವು. ಬೆಂಕಿ ನಂದಿಸುವುದರಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ನಗರ ಪೊಲೀಸ್ ಸಿಬ್ಬಂದಿ, ಅದಾನಿ ಪವರ್, 108 ಆ್ಯಂಬುಲೆನ್ಸ್, ಮುಂಬೈ ಮೆಟ್ರೋ ರೈಲ್ ಕಾರ್ಪೋರೇಶನ್ (ಎಂಎಂಆರ್‌ಸಿ), ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಹಾಗೂ ಬೃಹನ್ಮುಂಬೈ ಮಹಾ ನಗರ ಪಾಲಿಕೆ (ಬಿಎಂಸಿ), ಸ್ಥಳೀಯಾಡಳಿತದ ಸಿಬ್ಬಂದಿ ನೆರವು ನೀಡಿದರು.

ಎರಡು ಗಂಟೆಗಳ ಕಾರ್ಯಾಚರಣೆ ಬಳಿಕ ಅಪರಾಹ್ನ 3.11ಕ್ಕೆ ಬೆಂಕಿಯನ್ನು ನಂದಿಸಲಾಯಿತು. ಅನಂತರ ರದ್ದುಗೊಳಿಸಲಾಗಿದ್ದ ಮೆಟ್ರೋ ಸೇವೆಯನ್ನು ಮರು ಆರಂಭಿಸಲಾಯಿತು ಎಂದು ಎಂಎಂಆರ್‌ಸಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News