ʼಎಪಿಗಮಿಯʼ ಯೋಗರ್ಟ್ ಬ್ರ್ಯಾಂಡ್ ಸಂಸ್ಥಾಪಕ 42ರ ಹರೆಯದ ರೋಹನ್ ಮೀರ್ ಚಂದಾನಿ ಹೃದಯಾಘಾತದಿಂದ ನಿಧನ

Update: 2024-12-23 06:51 GMT

ರೋಹನ್ ಮೀರ್ ಚಂದಾನಿ (Photo: LinkedIn)

ಹೊಸದಿಲ್ಲಿ: ಜನಪ್ರಿಯ ʼಎಪಿಗಮಿಯʼ ಯೋಗರ್ಟ್ ಬ್ರ್ಯಾಂಡ್ ನ ಸಹ ಸಂಸ್ಥಾಪಕ ರೋಹನ್ ಮೀರ್ ಚಂದಾನಿ ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 42 ವರ್ಷ ವಯಸ್ಸಾಗಿತ್ತು.

ಡ್ರಮ್ಸ್ ಫುಡ್ ಇಂಟರ್ ನ್ಯಾಷನಲ್ ಕಂಪನಿ ಅಡಿಯಲ್ಲಿ ಸ್ಥಾಪನೆಗೊಂಡಿದ್ದ ಎಪಿಗಮಿಯ ಸಂಸ್ಥೆ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಯೋಗರ್ಟ್ ಬ್ರ್ಯಾಂಡ್ ಹುಟ್ಟು ಹಾಕಿದ್ದ ರೋಹನ್ ಮೀರ್ ಚಂದಾನಿ, ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ನ್ಯೂಯಾರ್ಕ್ ನ ಎನ್ವೈಯು ಸ್ಕೂಲ್ ಆಫ್ ಬಿಸಿನೆಸ್ ನಲ್ಲಿ ಪದವಿ ಪಡೆದಿದ್ದ ರೋಹನ್, 2013ರಲ್ಲಿ ಸ್ಥಾಪನೆಯಾಗಿದ್ದ ಎಪಿಗಮಿಯ ಸಂಸ್ಥೆಯ ಸಹ ಸಂಸ್ಥಾಪಕರಲ್ಲಿ ಓರ್ವರಾಗಿದ್ದರು. ಅಂಕುಲ್ ಗೋಯಲ್ ಹಾಗೂ ಉದಯ್ ಠಕ್ಕರ್ ರೊಂದಿಗೆ ಸೇರಿ ಎಪಿಗಮಿಯ ಸಂಸ್ಥೆ ಬೆಳೆಸಿದ್ದ ರೋಹನ್ ಮೀರ್ ಚಂದಾನಿಯ ಅಕಾಲಿಕ ನಿಧನ ಉದ್ಯಮ ವಲಯದಲ್ಲಿ ಆಘಾತವನ್ನುಂಟು ಮಾಡಿದೆ. ಕೇವಲ 42ರ ಹರೆಯದವರಾಗಿದ್ದ ರೋಹನ್ ಮೀರ್ ಚಂದಾನಿ ತಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಂಡಿದ್ದರು ಎಂದು ಹೇಳಲಾಗಿದೆ. ಹೀಗಿದ್ದೂ, ಅವರ ದಿಢೀರ್ ಅಗಲಿಕೆ ಉದ್ಯಮ ವಲಯದ ಹಲವರನ್ನು ಬೆಚ್ಚಿ ಬೀಳಿಸಿದೆ.

ರೋಹನ್ ಮೀರ್ ಚಂದಾನಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಸಹೋದ್ಯೋಗಿಗಳಾದ ಅಂಕುಲ್ ಗೋಯಲ್ ಹಾಗೂ ಉದಯ್ ಠಕ್ಕರ್, “ದೂರದೃಷ್ಟಿಯುಳ್ಳ ನಾಯಕರಾಗಿದ್ದ ರೋಹನ್, ಎಲ್ಲರಿಗೂ ಪ್ರೇರಣೆಯಾಗಿದ್ದರು. ಯಾವುದೇ ಸವಾಲನ್ನು ಮೆಟ್ಟಿ ನಿಲ್ಲಬಲ್ಲ ಸಾಮರ್ಥ್ಯ ಹೊಂದಿದ್ದ ರೋಹನ್, ಹಲವು ಬಾರಿ ಸವಾಲುಗಳನ್ನು ಸುಲಭವಾಗಿ ಪರಿಹರಿಸಿ ಕಂಪನಿಗೆ ಹೊಸ ಭಾಷ್ಯ ಬರೆದಿದ್ದರು. ರೋಹನ್ ಅಗಲಿಕೆಯಿಂದ ಕಂಪನಿಗೆ ಅಪಾರ ನಷ್ಟವಾಗಿರುವುದು ನಿಜ. ಇದಕ್ಕೂ ಮೀರಿ ಅವರೊಬ್ಬ ಒಳ್ಳೆಯ ಸ್ನೇಹಿತ, ಮಾರ್ಗದರ್ಶಿ ಮತ್ತು ಹಿತೈಷಿಯಾಗಿದ್ದರು. ರೋಹನ್ ಅಗಲಿಕೆಯನ್ನು ಭರಿಸುವ ಶಕ್ತಿ ಅವರ ಕುಟುಂಬದ ಸದಸ್ಯರಿಗೆ ದೊರೆಯಲಿ. ರೋಹನ್ ಹಾಕಿಕೊಟ್ಟಿರುವ ಮಾರ್ಗ, ಸೂಚನೆ ಹಾಗೂ ಎಚ್ಚರಿಕೆಯನ್ನು ನಮ್ಮ ಸಂಸ್ಥೆ ಪಾಲಿಸಲಿದೆ. ರೋಹನ್ ತೋರಿದ ಮಾರ್ಗದಲ್ಲಿ ನಮ್ಮ ಸಂಸ್ಥೆ ಸಾಗಲಿದೆ” ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News