2018-2022ರ ಅವಧಿಯಲ್ಲಿ IAS-IPS ಹುದ್ದೆಗಳಿಗೆ ನೇಮಕಗೊಂಡವರಲ್ಲಿ 46% ಸಾಮಾನ್ಯ ವರ್ಗಕ್ಕೆ ಸೇರಿದವರು: ಸಂಸತ್ತಿಗೆ ಕೇಂದ್ರದಿಂದ ಮಾಹಿತಿ
ಹೊಸದಿಲ್ಲಿ: 2018 ಮತ್ತು 2022ರ ನಡುವೆ ಭಾರತೀಯ ನಾಗರಿಕ ಸೇವೆ ಅಂದರೆ ಐಎಎಸ್ ಮತ್ತು ಐಪಿಎಸ್ ಹುದ್ದೆಗಳಿಗೆ ನೇಮಕಗೊಂಡವರಲ್ಲಿ ಹೆಚ್ಚಿನವರು ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದಾರೆ ಎಂಬುವುದನ್ನು ಸಂಸತ್ತಿಗೆ ಕೇಂದ್ರ ಸರಕಾರ ನೀಡಿರುವ ಅಂಕಿ ಅಂಶಗಳು ಬಹಿರಂಗಗೊಳಿಸಿದೆ.
ಭಾರತೀಯ ಆಡಳಿತ ಸೇವೆ (ಐಎಎಸ್) ಮತ್ತು ಭಾರತೀಯ ಪೊಲೀಸ್ ಸೇವೆ(ಐಪಿಎಸ್)ಗೆ ನೇಮಕಗೊಂಡ 1,653 ಜನರಲ್ಲಿ ಕನಿಷ್ಠ 46.15% ಜನರು ಸಾಮಾನ್ಯ ವರ್ಗಕ್ಕೆ ಮತ್ತು 29.4% ಜನರು ಹಿಂದುಳಿದ ವರ್ಗಗಳಿಗೆ(ಒಬಿಸಿ) ಸೇರಿದವರಾಗಿದ್ದಾರೆ. ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯದ ಅಧೀನದಲ್ಲಿನ ಸಿಬ್ಬಂದಿ ಮತ್ತು ತರಬೇತಿ ಇಲಾಖೆ(DoPT) ಪ್ರಕಾರ, IAS ಮತ್ತು IPS ಹುದ್ದೆಗೆ ನೇಮಕಗೊಂಡವರಲ್ಲಿ ಶೇಕಡಾ 16.33ರಷ್ಟು ಪರಿಶಿಷ್ಟ ಜಾತಿಗೆ ಮತ್ತು ಶೇಕಡಾ 7.83ರಷ್ಟು ಮಂದಿ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ.
ಡಿಎಂಕೆ ಸಂಸದ ಪಿ ವಿಲ್ಸನ್ ಅವರ ಪ್ರಶ್ನೆಗಳಿಗೆ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಲಿಖಿತ ಉತ್ತರದಲ್ಲಿ ಈ ವಿವರಗಳನ್ನು ಒದಗಿಸಿದ್ದಾರೆ.
2018 ಮತ್ತು 2022ರ ಅವಧಿಯಲ್ಲಿ ನೇಮಕಗೊಂಡ ಒಟ್ಟು 763 ಅಧಿಕಾರಿಗಳು ಅಂದರೆ 382 IAS ಮತ್ತು 381 IPS ಅಧಿಕಾರಿಗಳು ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದಾರೆ ಮತ್ತು 486 ಅಧಿಕಾರಿಗಳು ಎಂದರೆ 243 IAS ಅಧಿಕಾರಿಗಳು ಮತ್ತು 243 IPS ಅಧಿಕಾರಿಗಳು OBC ವರ್ಗಕ್ಕೆ ಸೇರಿದವರಾಗಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ 270 ಅಧಿಕಾರಿಗಳು ನೇಮಕಗೊಂಡಿದ್ದು, ಅದರಲ್ಲಿ 136 ಮಂದಿ ಐಎಎಸ್ ಮತ್ತು 134 ಮಂದಿ ಐಪಿಎಸ್ ಹುದ್ದೆಯನ್ನು ಪಡೆದುಕೊಂಡಿದ್ದಾರೆ. ಪರಿಶಿಷ್ಟ ಪಂಗಡಗಳಿಗೆ ಸೇರಿದ 134 ಮಂದಿ ನೇಮಕಗೊಂಡಿದ್ದು, ಅವರಲ್ಲಿ 67 ಮಂದಿ IAS ಮತ್ತು 67 ಮಂದಿ IPS ಹುದ್ದೆಗೆ ನೇಮಕಗೊಂಡಿದ್ದಾರೆ.
2022ರಲ್ಲಿ ಸಾಮಾನ್ಯ ವರ್ಗದಿಂದ 75 ಮಂದಿ, 45 ಮಂದಿ OBCಗಳು, 29 ಮಂದಿ SC ಗಳು ಮತ್ತು 13 ಮಂದಿ ST ಸಮುದಾಯಕ್ಕೆ ಸೇರಿದವರನ್ನು IAS ಹುದ್ದೆಗೆ ಆಯ್ಕೆ ಮಾಡಲಾಗಿದೆ. ಅದೇ ರೀತಿ ಐಪಿಎಸ್ ಹುದ್ದೆಗೆ ಸಾಮಾನ್ಯ ವರ್ಗದಿಂದ 83 ಮಂದಿ, 53 ಮಂದಿ ಒಬಿಸಿ, ಎಸ್ ಸಿ ಸಮುದಾಯಕ್ಕೆ ಸೇರಿದ 31 ಮಂದಿ ಮತ್ತು ಎಸ್ ಟಿ ಸಮುದಾಯಕ್ಕೆ ಸೇರಿದ 13 ಮಂದಿಯನ್ನು ಆಯ್ಕೆ ಮಾಡಲಾಗಿದೆ.
ಕ್ರಮವಾಗಿ 1,316 ಐಎಎಸ್ ಮತ್ತು 586 ಐಪಿಎಸ್ ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ. ಖಾಲಿ ಇರುವ 1,316 ಐಎಎಸ್ ಹುದ್ದೆಗಳ ಪೈಕಿ 794 ನೇರ ನೇಮಕಾತಿ ಮತ್ತು 522 ಬಡ್ತಿ ಹುದ್ದೆಗಳಾಗಿವೆ. ಖಾಲಿ ಇರುವ 586 ಐಪಿಎಸ್ ಹುದ್ದೆಗಳಲ್ಲಿ 209 ನೇರ ನೇಮಕಾತಿ ಮತ್ತು 377 ಬಡ್ತಿ ಹುದ್ದೆಗಳಾಗಿದೆ ಎಂದು ಅಂಕಿ-ಅಂಶಗಳಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕದಲ್ಲಿ 314 IAS ಅಧಿಕಾರಿ ಹುದ್ದೆಗಳಿದೆ. ಅವುಗಳಲ್ಲಿ ಕೇವಲ 273 ಹುದ್ದೆಗಳು ಭರ್ತಿಯಾಗಿದ್ದು, 41 ಹುದ್ದೆಗಳು ಖಾಲಿ ಉಳಿದಿವೆ. 224 IPS ಹುದ್ದೆಗಳಲ್ಲಿ 193 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದ್ದು 31 ಹುದ್ದೆಗಳು ಖಾಲಿ ಉಳಿದಿವೆ.
ಭಾರತೀಯ ಅರಣ್ಯ ಸೇವೆ ಅಧಿಕಾರಿಗಳ ನೇಮಕಾತಿಯ ದತ್ತಾಂಶವನ್ನು ವಿಶ್ಲೇಷಣೆ ನಡೆಸಿದಾಗ 2018 ಮತ್ತು 2024ರ ಅವಧಿಯಲ್ಲಿ ಒಟ್ಟು 246 ಸಾಮಾನ್ಯ ವರ್ಗದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, 283 ಮಂದಿ ಒಬಿಸಿ, 115 ಮಂದಿ ಎಸ್ ಸಿ ಮತ್ತು 58 ಮಂದಿ ಎಸ್ ಟಿ ಅಭ್ಯರ್ಥಿಗಳನ್ನುಆಯ್ಕೆ ಮಾಡಲಾಗಿದೆ.
ಗಮನಾರ್ಹ ಎಂದರೆ ಭಾರತೀಯ ಅರಣ್ಯ ಸೇವೆಗೆ ನೇಮಕಗೊಂಡ OBC ಅಧಿಕಾರಿಗಳ ಸಂಖ್ಯೆ ಸಾಮಾನ್ಯ ವರ್ಗಕ್ಕಿಂತ ಹೆಚ್ಚಾಗಿದೆ. 3,193 ಮಂಜೂರಾದ ಹುದ್ದೆಗಳಲ್ಲಿ ಕೇವಲ 2,151 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ.