ಶವ ಸಂಭೋಗ ಅತ್ಯಾಚಾರವಲ್ಲ: ಛತ್ತೀಸ್‍ಗಢ ಹೈಕೋರ್ಟ್

Update: 2024-12-23 04:28 GMT

ಸಾಂದರ್ಭಿಕ ಚಿತ್ರ

ರಾಯಪುರ: ಶವದೊಂದಿಗೆ ಸಂಭೋಗ ನಡೆಸುವುದು ಭಾರತದ ಅಪರಾಧ ಕಾನೂನುಗಳ ಪ್ರಕಾರ ಅತ್ಯಾಚಾರ ಎನಿಸುವುದಿಲ್ಲ ಎಂದು ಛತ್ತೀಸ್‍ಗಢ ಹೈಕೋರ್ಟ್ ತೀರ್ಪು ನೀಡಿದೆ.

ಅಪ್ರಾಪ್ತ ವಯಸ್ಸಿನ ಬಾಲಕಿಯ ಅಪಹರಣ, ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಇಬ್ಬರು ಪುರುಷರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಮೇಶ್ ಸಿನ್ಹಾ ಮತ್ತು ನ್ಯಾಯಮೂರ್ತಿ ಬಿಭು ದತ್ತಗುರು ಅವರನ್ನೊಳಗೊಂಡ ನ್ಯಾಯಪೀಠ, "ಮೃತದೇಹದ ಮೇಲೆ ಅತ್ಯಾಚಾರ ನಡೆಸುವುದು ಭಯಾನಕ ಕೃತ್ಯ. ಭಾರತೀಯ ದಂಡಸಂಹಿತೆಯ ಸೆಕ್ಷನ್‍ಗಳ ಅಡಿಯಲ್ಲಿ ಮತ್ತು ಪೋಕ್ಸೋ ಕಾಯ್ದೆಯಡಿ ಅದು ಅತ್ಯಾಚಾರ ಎನಿಸುವುದಿಲ್ಲ" ಎಂದು ಅಭಿಪ್ರಾಯಪಟ್ಟಿದೆ.

ಆರೋಪಿಗಳಾದ ನೀಲಕಾಂತ್ ಎಂಬಾತ ಎಸಗಿರುವ ಅಪರಾಧ ಅಂದರೆ ಮೃತದೇಹದ ಮೇಲೆ ಅತ್ಯಾಚಾರ ಎಸಗಿರುವುದು ನಿಸ್ಸಂದೇಹವಾಗಿ ಯಾರೂ ಯೋಚಿಸಲಾಗದ ಭಯಾನಕ ಅಪರಾಧ. ಆದರೆ ವಾಸ್ತವಾಂಶವೆಂದರೆ ಇಂದಿನವರೆಗೆ ಆತನಿಗೆ ಭಾರತೀಯ ದಂಡಸಂಹಿತೆಯ ಸೆಕ್ಷನ್ 363, 376 (3) ಮತ್ತು ಪೋಕ್ಸೋ ಕಾಯ್ದೆ-2012ರ ಸೆಕ್ಷನ್ 3(2)(5) ಅನ್ವಯ ಶವಸಂಭೋಗಕ್ಕೆ ಶಿಕ್ಷೆ ವಿಧಿಸುವಂತಿಲ್ಲ" ಎಂದು ಇತ್ತೀಚಿನ ವಿಚಾರಣೆ ವೇಳೆ ಅಭಿಪ್ರಾಯಪಟ್ಟಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.

"ಮೇಲೆ ಹೇಳಿದ ಸೆಕ್ಷನ್‍ಗಳ ಅಡಿಯಲ್ಲಿ ಆರೋಪಿಗೆ ಶಿಕ್ಷೆ ವಿಧಿಸಲು ಸಂತ್ರಸ್ತೆ ಜೀವಂತ ಇರಬೇಕು" ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಅಪ್ರಾಪ್ತ ವಯಸ್ಸಿನ ಯುವತಿಯ ಮೃತದೇಹದ ಜತೆ ಸಂಭೋಗ ನಡೆಸಿದ ಆರೋಪಗಳಲ್ಲಿ ಒಬ್ಬ ಆರೋಪಿಯನ್ನು ದೋಷಮುಕ್ತಗೊಳಿಸಿದ ತೀರ್ಪನ್ನು ಎತ್ತಿಹಿಡಿಯುವ ವೇಳೆ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News