ಉತ್ತರ ಪ್ರದೇಶ: ದಲಿತ ವಿದ್ಯಾರ್ಥಿಗಳಿಗೆ ಥಳಿತ; ಶಿಕ್ಷಕಿಯ ಅಮಾನತು
Update: 2024-12-22 17:51 GMT
ಆಗ್ರಾ (ಉ.ಪ್ರ.): ದಲಿತ ವಿದ್ಯಾರ್ಥಿಗಳಿಗೆ ಥಳಿಸಿದ ಆರೋಪದಲ್ಲಿ ಮೈನಪುರಿ ಜಿಲ್ಲೆಯ ರೀಚಪುರ ಗ್ರಾಮದ ಸರಕಾರಿ ಶಾಲೆಯ ಅದ್ಯಾಪಕಿಯನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಈ ಘಟನೆ 10 ದಿನಗಳ ಹಿಂದೆ ನಡೆದಿದೆ. ಹೆತ್ತವರು ತಮ್ಮ ಮಕ್ಕಳ ದೇಹದಲ್ಲಿ ಗಾಯಗಳನ್ನು ಗಮನಿಸಿದ ಬಳಿಕ ಹಾಗೂ ಕಳವಳ ವ್ಯಕ್ತಪಡಿಸಿದ ಬಳಿಕ ಗುರುವಾರ ಈ ಘಟನೆ ಬೆಳಕಿಗೆ ಬಂದಿದೆ.
ಮಕ್ಕಳದ ದೇಹದಲ್ಲಿ ಗಾಯಗಳಾಗಿರುವುದನ್ನು ತೋರಿಸುವ ವೀಡಿಯೊ ಕಳೆದ ವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. 1ರಿಂದ 8ನೇ ತರಗತಿ ವರೆಗಿನ ತರಗತಿಗಳಿಗೆ ಬೋಧಿಸುತ್ತಿರುವ ಶಿಕ್ಷಕಿ ಅನಿತಾ ಗುಪ್ತಾ ದಿನನಿತ್ಯ ಮಕ್ಕಳಿಗೆ ಕ್ಷುಲ್ಲಕ ಕಾರಣಕ್ಕೆ ಹೊಡೆಯುತ್ತಿದ್ದಾರೆ ಎಂದು ಮಕ್ಕಳ ಹೆತ್ತವರು ಆರೋಪಿಸಿದ್ದರು.
ಈ ಆರೋಪದ ಕುರಿತಂತೆ ಜಿಲ್ಲಾಡಳಿತ ತನಿಖೆ ಆರಂಭಿಸಿತ್ತು. ತನಿಖೆ ಸಂದರ್ಭ ಗುಪ್ತಾ ಅವರು ಮಕ್ಕಳಿಗೆ ಹೊಡೆದಿದ್ದಾರೆ ಎಂಬುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.