ಥಾಣೆ: ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಕೊಲೆ ಪ್ರಕರಣದ ಆರೋಪಿ
ಥಾಣೆ: ಸೆಷನ್ಸ್ ನ್ಯಾಯಾಲಯವೊಂದರಲ್ಲಿ ವಿಚಾರಣೆ ನಡೆಯುತ್ತಿದ್ದದ ಸಂದರ್ಭದಲ್ಲಿ 22 ವರ್ಷದ ಕೊಲೆ ಪ್ರಕರಣದ ಆರೋಪಿಯೊಬ್ಬ ನ್ಯಾಯಾಧೀಶರ ಮೇಲೆ ಚಪ್ಪಲಿ ತೂರಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.
ಆದರೆ, ಆ ಚಪ್ಪಲಿ ನ್ಯಾಯಾಧೀಶರಿಗೆ ತಾಕುವ ಬದಲು, ಅವರ ಡೆಸ್ಕ್ ಮುಂದಿದ್ದ ಚೌಕಟ್ಟಿಗೆ ತಾಗಿ, ನ್ಯಾಯಪೀಠದ ಗುಮಾಸ್ತರ ಪಕ್ಕ ಬಿದ್ದಿತು ಎಂದು ಅವರು ಹೇಳಿದ್ದಾರೆ.
ಶನಿವಾರ ಮಧ್ಯಾಹ್ನ ಕಲ್ಯಾಣ್ ಪಟ್ಟಣದಲ್ಲಿರುವ ನ್ಯಾಯಾಲಯದಲ್ಲಿ ಈ ಘಟನೆ ನಡೆದಿದ್ದು, ಇದರ ಬೆನ್ನಿಗೇ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕೊಲೆ ಪ್ರಕರಣದ ವಿಚಾರಣೆಯ ಸಂಬಂಧ ಆರೋಪಿ ಕಿರಣ್ ಸಂತೋಷ್ ಭರಂನನ್ನು ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಆರ್.ಜಿ.ವಾಘ್ಮರೆ ಎದುರು ಹಾಜರುಪಡಿಸಲಾಗಿತ್ತು ಎಂದು ಮಹಾತ್ಮ ಫುಲೆ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನನ್ನ ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಆರೋಪಿಯು ನ್ಯಾಯಾಧೀಶರಿಗೆ ಮನವಿ ಮಾಡಿದ. ಆಗ, ಈ ಕುರಿತು ನಿನ್ನ ವಕೀಲರ ಮೂಲಕ ಅರ್ಜಿಯೊಂದನ್ನು ಸಲ್ಲಿಸು ಎಂದು ಆರೋಪಿಗೆ ನ್ಯಾಯಾಧೀಶರು ಸೂಚಿಸಿದರು ಎಂದು ಅವರು ಹೇಳಿದ್ದಾರೆ.
ನಂತರ, ಆರೋಪಿಯ ವಕೀಲರ ಹೆಸರನ್ನು ಕೂಗಿ ಕರೆಯಲಾಯಿತು. ಆದರೆ, ಆತನ ವಕೀಲ ನ್ಯಾಯಾಲಯದಲ್ಲಿ ಕಂಡು ಬರಲಿಲ್ಲ. ಹೀಗಾಗಿ, ಆರೋಪಿಯನ್ನು ಪ್ರತಿನಿಧಿಸಲು ಮತ್ತೊಬ್ಬ ವಕೀಲರ ಹೆಸರನ್ನು ನೀಡುವಂತೆ ಆತನಿಗೆ ಸೂಚಿಸಿ, ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿತು ಎಂದು ಅವರು ತಿಳಿಸಿದ್ದಾರೆ.
ಈ ವೇಳೆ ತನ್ನ ಕಾಲಿನಲ್ಲಿದ್ದ ಚಪ್ಪಲಿಯನ್ನು ಎಳೆದುಕೊಂಡು ನ್ಯಾಯಾಧೀಶರತ್ತ ಎಸೆದ. ಇದರಿಂದ ನ್ಯಾಯಾಲಯದಲ್ಲಿದ್ದ ಕೆಲಕಾಲ ಆತಂಕಕ್ಕೊಳಗಾದರು.
ಇದರ ಬೆನ್ನಿಗೇ ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ ಗಳಾದ 125 ಹಾಗೂ 132ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದೂ ಅವರು ತಿಳಿಸಿದ್ದಾರೆ.