ಕಾಲ್ತುಳಿತ ಘಟನೆ ಕುರಿತು ಮಾಹಿತಿ ನೀಡಿದರೂ ಚಿತ್ರ ವೀಕ್ಷಣೆ ಪೂರ್ಣಗೊಳಿಸಬೇಕು ಎಂದು ಹಟ ಹಿಡಿದಿದ್ದ ನಟ ಅಲ್ಲು ಅರ್ಜುನ್: ತೆಲಂಗಾಣ ಪೊಲೀಸರ ಆರೋಪ
ಹೈದರಾಬಾದ್: ಇಲ್ಲಿನ ಸಂಧ್ಯಾಲ ಚಿತ್ರಮಂದಿರದಲ್ಲಿ ಆಯೋಜನೆಗೊಂಡಿದ್ದ ಪುಷ್ಪ-2 ಚಿತ್ರದ ಪ್ರೀಮಿಯರ್ ಪ್ರದರ್ಶನದ ವೇಳೆ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸುತ್ತಿದ್ದ ನಟ ಅಲ್ಲು ಅರ್ಜುನ್ ಅವರಿಗೆ ಚಿತ್ರಮಂದಿರದ ಹೊರಗೆ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿರುವ ಕುರಿತು ಮಾಹಿತಿ ನೀಡಲಾಗಿತ್ತು. ಆದರೆ, ಅವರು ಚಿತ್ರವನ್ನು ಸಂಪೂರ್ಣವಾಗಿ ವೀಕ್ಷಿಸಲು ಬಯಸಿದ್ದರು ಎಂದು ಹೈದರಾಬಾದ್ ಸಹಾಯಕ ಪೊಲೀಸ್ ಆಯುಕ್ತ ರಮೇಶ್ ಪುನರುಚ್ಚರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, “ಚಿತ್ರಮಂದಿರದ ಹೊರಗೆ ನಡೆದ ಕಾಲ್ತುಳಿತ ಘಟನೆಯಲ್ಲಿ ಮಹಿಳೆಯೊಬ್ಬರು ಮೃತಟ್ಟಿರುವ ಕುರಿತು ಚಿತ್ರಮಂದಿರದೊಳಗಿದ್ದ ಅಲ್ಲು ಅರ್ಜುನ್ ಅವರ ವ್ಯವಸ್ಥಾಪಕ ಸಂತೋಷ್ ಅವರಿಗೆ ಮೊದಲು ಮಾಹಿತಿ ನೀಡಲಾಯಿತು. ಪರಿಸ್ಥಿತಿ ನಿಯಂತ್ರಣ ಕಳೆದುಕೊಳ್ಳುತ್ತಿದ್ದು, ಓರ್ವ ಬಾಲಕನನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ಅವರಿಗೆ ತಿಳಿಸಲಾಯಿತು. ಆದರೆ, ನಾವು ನಟ ಅಲ್ಲು ಅರ್ಜುನ್ ಅವರನ್ನು ಭೇಟಿ ಮಾಡಲು ಸಂತೋಷ್ ಹಾಗೂ ಮತ್ತೊಬ್ಬ ವ್ಯಕ್ತಿ ಅವಕಾಶ ನೀಡಲಿಲ್ಲ” ಎಂದು ಆರೋಪಿಸಿದ್ದಾರೆ.
ಘಟನೆಯ ಕುರಿತು ಅಲ್ಲು ಅರ್ಜುನ್ ಅವರಿಗೆ ಮಾಹಿತಿ ನೀಡುವಂತೆ ನಾವು ಅವರಿಗೆ ಒತ್ತಾಯಿಸಿದೆವು. ಆದರೆ, ಅವರು ಹಾಗೆ ಮಾಡಲಿಲ್ಲ ಎಂದೂ ಸಹಾಯಕ ಪೊಲೀಸ್ ಆಯುಕ್ತ ರಮೇಶ್ ಒತ್ತಿ ಹೇಳಿದ್ದಾರೆ.
ಯಾವಾಗ ಪೊಲೀಸ್ ಮಹಾ ನಿರ್ದೇಶಕರು ಈ ಕುರಿತು ನಟ ಅಲ್ಲು ಅರ್ಜುನ್ ಗೆ ಮಾಹಿತಿ ನೀಡುವಂತೆ ಸಹಾಯಕ ಪೊಲೀಸ್ ಆಯುಕ್ತರಿಗೆ ಒತ್ತಡ ಹೇರಿದರೊ, ಆಗ ಅವರು ವೈಯಕ್ತಿಕವಾಗಿ ಅಲ್ಲು ಅರ್ಜುನ್ ಅವರನ್ನು ಭೇಟಿ ಮಾಡಿ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ. “ನೀವೊಬ್ಬ ತಾರಾ ನಟರಾಗಿದ್ದು, ನೀವು ಚಿತ್ರಮಂದಿರದಿಂದ ಹೊರ ಹೋಗಲು ನಮ್ಮ ಅಧಿಕಾರಿಗಳು ದಾರಿಯನ್ನು ತೆರವುಗೊಳಿಸಿದ್ದಾರೆ. ಹೀಗಾಗಿ ನೀವು ಇಲ್ಲಿಂದ ತೆರಳಿ ಎಂದು ತಿಳಿಸಿದೆ. ಆದರೆ, ಅವರು ಚಿತ್ರ ವೀಕ್ಷಣೆಯನ್ನು ಸಂಪೂರ್ಣಗೊಳಿಸಬೇಕು ಎಂದು ಹಟ ಹಿಡಿದರು. ಯಾವಾಗ ಪೊಲೀಸ್ ಮಹಾ ನಿರ್ದೇಶಕರು ಸ್ಥಳಕ್ಕೆ ಆಗಮಿಸಿ, ಅವರಿಗೆ ಅಲ್ಲಿಂದ ತೆರಳಲು ಹತ್ತು ನಿಮಿಷಗಳ ಅವಕಾಶ ನೀಡಿದರೊ, ಆಗ ಮಾತ್ರ ಅವರು ಅಲ್ಲಿಂದ ಹೊರ ನಡೆದರು” ಎಂದೂ ರಮೇಶ್ ಆರೋಪಿಸಿದ್ದಾರೆ.
ತೆಲಂಗಾಣ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ಶಾಸಕ ಅಕ್ಬರುದ್ದೀನ್ ಉವೈಸಿ ನೀಡಿದ್ದ ಹೇಳಿಕೆಯಂತೆಯೇ ತೆಲಂಗಾಣ ಪೊಲೀಸರೂ ಹೇಳಿಕೆ ನೀಡಿದ್ದಾರೆ.